ಸಿಂಧನೂರು ತಹಸಿಲ್ ಕಚೇರಿಯಲ್ಲಿ ಭೂಸುರಕ್ಷಾ ಯೋಜನೆಯ ಕೊಠಡಿಯನ್ನು ಶಾಸಕ ಹಂಪನಗೌಡ ಬಾದರ್ಲಿ ಉದ್ಘಾಟಿಸಿದರು. ತಹಸೀಲ್ದಾರ್ ಅರುಣ್ ದೇಸಾಯಿ ಇದ್ದರು. 
ಜಿಲ್ಲೆ

ಭೂಸುರಕ್ಷಾ ಯೋಜನೆಯಿಂದ ಹಳೆಯ ದಾಖಲಾತಿ ರಕ್ಷಣೆ

Kopala - Desk - Eraveni

ಸಿಂಧನೂರು: ಭೂಸುರಕ್ಷಾ ಯೋಜನೆ ರಾಜ್ಯದ ಕಂದಾಯ ಇಲಾಖೆ ಕೈಗೊಂಡಿರುವ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಇದರಿಂದ ಹಳೇ ದಾಖಲಾತಿ ರಕ್ಷಣೆ ಸಾಧ್ಯವಾಗಲಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.

ನಗರದ ತಹಸಿಲ್ ಕಚೇರಿಯಲ್ಲಿ ಬುಧವಾರ ಭೂಸುರಕ್ಷಾ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಈ ಯೋಜನೆಯಡಿ ತಾಲೂಕು ಕಚೇರಿಯ ಅಭಿಲೇಖಾಲಯಗಳಲ್ಲಿರುವ ಅತ್ಯಂತ ಹಳೆಯ ಭೂ ದಾಖಲೆಗಳನ್ನು ಇಂಡೆಕ್ಸಿಂಗ್, ಕ್ಯಾಟಲಾಗಿಂಗ್, ಸ್ಕ್ಯಾನಿಂಗ್ ಮತ್ತು ಅಪ್‌ಲೋಡಿಂಗ್ ಮಾಡಿ ಗಣಕೀಕರಣಗೊಳಿಸಲಾಗುತ್ತದೆ.

ಡಿಜಿಟಲೀಕರಣದಿಂದ ಅಭಿಲೇಖಾಲಯದ ಸಿಬ್ಬಂದಿಯನ್ನು ಸಂಪರ್ಕಿಸಿ ದಾಖಲಾತಿ ಪಡೆಯುವುದು ತಪ್ಪುತ್ತದೆ. ದಾಖಲೆಗಳ ವ್ಯಾತ್ಯಾಸ, ರೇಕಾರ್ಡ್ ಮಿಸ್ಸಿಂಗ್, ವಿಳಂಬ ಎಲ್ಲದಕ್ಕೂ ಪರಿಹಾರ ಸಿಗಲಿದೆ. ನಾಗರಿಕರು ದಾಖಲೆಗಳಿಗಾಗಿ ಕಚೇರಿಗೆ ಭೇಟಿ ನೀಡುವ ಬದಲು ಸುಲಭವಾಗಿ ಆನ್‌ಲೈನ್ ಮೂಲಕ ಡೌನ್‌ಲೋಡ್ ಮಾಡಬಹುದು ಎಂದರು.

ತಹಸೀಲ್ದಾರ್ ಅರುಣ್ ದೇಸಾಯಿ ಮಾತನಾಡಿ, ಈ ಯೋಜನೆಯಿಂದ ದಾಖಲೆ ಸುಭದ್ರ, ಶಾಶ್ವತವಾಗಿ ಉಳಿದುಕೊಳ್ಳಲಿವೆ. ಹೊಸ ತಂತ್ರಜ್ಞಾನ ಅಳವಡಿಕೆಯಿಂದ ನಿಮ್ಮ ಕೈಗೆ ಶಕ್ತಿ ಬರಲಿದೆ. ತ್ವರಿತವಾಗಿ ಸರಳ ಆಡಳಿತಕ್ಕೆ ಅನುಕೂಲವಾಗಲಿದೆ. ಸಿಂಧನೂರಿನ ಅಭಿಲೇಖಾಲಯದಲ್ಲಿ 30 ಸಾವಿರ ಕಡತಗಳಿದ್ದು, 10.50 ಲಕ್ಷ ಪೇಜ್‌ಗಳು ಸ್ಕ್ಯಾನಿಂಗ್‌ಗೆ ಒಳಪಟ್ಟು ದಾಖಲಾತಿ ಸುಭದ್ರಗೊಳ್ಳಲಿವೆ ಎಂದರು.