ಸಿಂಧನೂರಿನಲ್ಲಿ ಉಪ ತಹಸೀಲ್ದಾರ್ ಚಂದ್ರಶೇಖರಗೆ ಟಿಯುಸಿಐ ಮುಖಂಡರು ಮನವಿ ಸಲ್ಲಿಸಿದರು. ಪ್ರಮುಖರಾದ ಎಂ.ಗಂಗಾಧರ, ಎಚ್.ಆರ್.ಹೊಸಮನಿ, ಹುಲುಗಪ್ಪ ಬಳ್ಳಾರಿ, ಮುದಿಯಪ್ಪ ಹನುಮನಗರಕ್ಯಾಂಪ್ ಇತರರಿದ್ದರು. 
ಜಿಲ್ಲೆ

ಕಾರ್ಮಿಕರಿಗೆ ಕಾನೂನು ರಕ್ಷಣೆ ಒದಗಿಸಿ

Kopala - Desk - Eraveni

ಸಿಂಧನೂರು: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ (ಟಿಯುಸಿಐ) ತಾಲೂಕು ಘಟಕ ನೇತೃತ್ವದಲ್ಲಿ ಸೋಮವಾರ ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಮೋದಿ ಸರ್ಕಾರದಲ್ಲಿ ಕಾರ್ಮಿಕ ಮತ್ತು ಉದ್ಯೋಗಿಗಳಿಗೆ ಕನಿಷ್ಠ ಜೀವನ ಭದ್ರತೆ ಇಲ್ಲವಾಗಿದೆ. ಕಾರ್ಮಿಕರ ಶ್ರಮಶಕ್ತಿಯನ್ನು ಅಗ್ಗದ ದರದಲ್ಲಿ ಸುಲಿಗೆ ಮಾಡಲಾಗುತ್ತಿದೆ. ಹೊಸ ನಾಲ್ಕು ಕಾರ್ಮಿಕ ಸಂಹಿತೆಗಳ ರದ್ದತಿಗಾಗಿ ನಡೆಯುತ್ತಿರುವ ಹೋರಾಟವನ್ನು ಸರ್ಕಾರವೇ ತುಳಿದು ಹಾಕುತ್ತಿದೆ.

ನಾಲ್ಕು ಕಾರ್ಮಿಕ ವಿರೋಧಿ ನೀತಿಗಳನ್ನು ರದ್ದುಗೊಳಿಸಬೇಕು. ಕನಿಷ್ಠ ವೇತನ ಜಾರಿಗೊಳಿಸಿ, ಮಾಸಿಕ 31500 ರೂ. ವೇತನ ನಿಗದಿಪಡಿಸಬೇಕು. ಎಲ್ಲರಿಗೂ 8 ಗಂಟೆಗಳ ಕೆಲಸ, ರಜಾದಿನಗಳು ಮತ್ತು ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ಖಚಿತಪಡಿಸಬೇಕು. ಗುತ್ತಿಗೆ ಕಾರ್ಮಿಕ ಪದ್ಧತಿ ರದ್ದುಪಡಿಸಿ, ಎಲ್ಲ ಕ್ಷೇತ್ರಗಳಿಗೆ ಸಮಾನ ವೇತನ ಖಚಿತಪಡಿಸಬೇಕು. ವಲಸೆ ಕಾರ್ಮಿಕರಿಗೆ ಕಾನೂನು ರಕ್ಷಣೆ ಒದಗಿಸಬೇಕೆಂದು ಒತ್ತಾಯಿಸಿದರು.

ಟಿಯುಸಿಐ ರಾಜ್ಯ ಉಪಾಧ್ಯಕ್ಷ ಎಂ.ಗಂಗಾಧರ, ಜಿಲ್ಲಾ ಸಮಿತಿ ಸದಸ್ಯ ಎಚ್.ಆರ್.ಹೊಸಮನಿ, ಶಂಕರನಾಗ ಆಟೋ ಚಾಲಕರ ಸಂಘದ ಅಧ್ಯಕ್ಷ ಹುಲುಗಪ್ಪ ಬಳ್ಳಾರಿ, ತಾಲೂಕು ಸಮಿತಿ ಸದಸ್ಯ ಮುದಿಯಪ್ಪ ಹನುಮನಗರಕ್ಯಾಂಪ್, ರೈತ ಸಂಘದ ಉಪಾಧ್ಯಕ್ಷ ಹನುಮಂತ ಗೋಡಿಹಾಳ, ಪ್ರಮುಖರಾದ ಮಹಾರಾಜ, ಯಮನೂರ, ಮುದಿಯಪ್ಪ, ರಾಜು ನಾಯಕ, ಸಂಗಪ್ಪ, ಆನಂದ, ವೆಂಕಟೇಶರೆಡ್ಡಿ, ಯಮನೂರ ಬೂತಲದಿನ್ನಿ, ದುರುಗಪ್ಪ ಬಸಪುರ, ಹನುಮಂತ, ಹುಚ್ಚಪ್ಪ, ಬಸವರಾಜ ಬೂತಲದಿನ್ನಿ, ಆಕಾಶ ಇದ್ದರು.