ಜಿಲ್ಲೆ

ಸಮವಸ್ತ್ರದಲ್ಲೇ ಹೊಟ್ಟೆಗೆ ಎಣ್ಣೆ ಇಳಿಸಿದ ಪೊಲೀಸ್​ ಸಿಬ್ಬಂದಿ! ಪ್ರಶ್ನಿಸಿದ್ದಕ್ಕೆ ಖಾಕಿ ದೌರ್ಜನ್ಯ?

ಕುಣಿಗಲ್​(ತುಮಕೂರು): ಸಮವಸ್ತ್ರದಲ್ಲೇ ಪೊಲೀಸ್​ ವಾಹನದಲ್ಲಿ ಕುಳಿತು ಮಂಗಳವಾರ ರಾತ್ರಿ ಮದ್ಯ ಸೇವಿಸಿದ್ದ ಆರೋಪದಲ್ಲಿ ಮೂವರು ಪೊಲೀಸರನ್ನು ಎಸ್ಪಿ ಡಾ.ಕೆ.ವಂಶಿಕೃಷ್ಣ ಬುಧವಾರ ಅಮಾನತು ಮಾಡಿದ್ದಾರೆ.

ಗ್ರಾಪಂ ಚುನಾವಣೆ ಕರ್ತವ್ಯ ಮುಗಿಸಿದ ನಂತರ ಪಟ್ಟಣದ ಮಹಾತ್ಮಗಾಂಧಿ ಕಾಲೇಜು ಮುಂಭಾಗ ಮೂವರು ಪೊಲೀಸರು ಮದ್ಯ ಸೇವನೆ ಮಾಡುತ್ತಿದ್ದುದನ್ನು ಕೆಆರ್​ಎಸ್​ ಪಕ್ಷದ ಯುವ ಘಟಕದ ಅಧ್ಯಕ್ಷ ರಘು ಜಾಣಗೆರೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದರು. ವಿಡಿಯೋದಲ್ಲಿ ಪೊಲೀಸರು ಮದ್ಯಪಾನ ಮಾಡುತ್ತಿರುವ ದಾಖಲೆ ಇಲ್ಲ. ಆದರೂ ಕುಡಿದಿದ್ದಾರೆ ಎಂದು ಹೇಗೆ ಹೇಳುತ್ತೀರಾ? ಎಂದು ಪೊಲೀಸರು ರಘು ಜಾಣಗೆರೆ ಹಾಗೂ ಆತನ ಸ್ನೇಹಿತರನ್ನು ಬಂಧಿಸಿದ್ದರು. ಬಳಿಕ ಬಿಡುಗಡೆ ಮಾಡಿದ್ದಾರೆ. ಇನ್ನೊಂದೆಡೆ ಠಾಣೆಯಲ್ಲಿ ಪೋಲಿಸರು ಹಲ್ಲೆ ನಡೆಸಿದ್ದಾಗಿ ರಘು ಜಾಣಗೆರೆ ಆರೋಪಿಸಿದ್ದಾರೆ.ಪಕ್ಷದ ಮುಖಂಡರ ಬಂಧನ ವಿಷಯ ತಿಳಿಯುತ್ತಿದ್ದಂತೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ನೇತೃತ್ವದಲ್ಲಿ ಕಾರ್ಯಕರ್ತರು ಬುಧವಾರ ಬೆಳಗ್ಗೆ ಠಾಣೆ ಮುಂದೆ ಪ್ರತಿಭಟನೆಗೆ ಮುಂದಾದರು.

ಅಷ್ಟರಲ್ಲಿ ಸ್ಥಳಕ್ಕಾಗಮಿಸಿದ ಸಿಪಿಐ ಗುರುಪ್ರಸಾದ್​ ಹಾಗೂ ವಿಕಾಸ್​ ಗೌಡ, ದೂರು ನೀಡಿದ್ದೀರಿ. ಮೇಲಧಿಕಾರಿಗಳು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿದ್ದಾರೆ. ಚುನಾವಣೆ ನೀತಿ ಸಂಹಿತೆ ಜಾರಿ ಇರುವ ಕಾರಣ ಪ್ರತಿಭಟನೆ ನಡೆಸಲು ಅವಕಾಶ ನೀಡುವುದಿಲ್ಲ ಎನ್ನುತ್ತಿದ್ದಂತೆ ಪೊಲೀಸರು ಮತ್ತು ರವಿಕೃಷ್ಣಾರೆಡ್ಡಿ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ರವಿಕೃಷ್ಣಾರೆಡ್ಡಿ ಸೇರಿ ಪಕ್ಷದ ಕಾರ್ಯಕರ್ತರನ್ನು ವಶಕ್ಕೆ ಪಡೆದರು. ನಂತರ ಠಾಣೆಯಲ್ಲಿ ಡಿವೈಎಸ್ಪಿ ಜಗದೀಶ್​ ಪ್ರತಿಭಟನಾಕಾರರ ಜತೆ ಮಾತುಕತೆ ನಡೆಸಿದರು. ಇದನ್ನೂ ಓದಿರಿ ರಾಜ್ಯದಲ್ಲಿ ಕರ್ಫ್ಯೂ ಜಾರಿ: ಶಾಲಾ-ಕಾಲೇಜು ಆರಂಭ ಆಗುತ್ತಾ? ಇಲ್ಲಿದೆ ಮಾಹಿತಿ

ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವ ಪೊಲಿಸರ ವಿರುದ್ಧ ಕ್ರಮಕೈಗೊಳ್ಳಬೇಕು ಹಾಗೂ ಮದ್ಯಪಾನ ಮಾಡಿದ ಪೊಲೀಸರನ್ನು ಅಮಾನತು ಮಾಡಬೇಕೆಂದು ರವಿ ಕೃಷ್ಣಾರೆಡ್ಡಿ ಒತ್ತಾಯಿಸಿದರು. ಹಲ್ಲೆ ನಡೆಸಿರುವ ಪೊಲೀಸರ ಮೇಲೆ ಕ್ರಮಕ್ಕೆ ನ್ಯಾಯಾಲಯದ ಅನುಮತಿಗೆ ಅರ್ಜಿ ಸಲ್ಲಿಸಲಾಗಿದೆ. ಆದೇಶ ಬಂದ ಮೇಲೆ ಕ್ರಮಕೈಗೊಳ್ಳುವುದಾಗಿ ಡಿವೈಎಸ್​ಪಿ ಭರವಸೆ ನೀಡಿದ ಮೇರೆಗೆ ಪ್ರತಿಭಟನಾಕಾರರು ಪ್ರತಿಭಟನೆ ಕೈಬಿಟ್ಟರು. ಇಷ್ಟೆಲ್ಲ ಬೆಳವಣಿಗೆ ನಡುವೆ ಮದ್ಯ ಸೇವನೆ ಆರೋಪದಲ್ಲಿ ಚಿಕ್ಕನಾಯಕನಹಳ್ಳಿ ಎಎಸ್​ಐ ಶ್ರೀನಿವಾಸ್​, ದಂಡಿನಶಿವರ ಠಾಣೆ ಪೇದೆ ಪರಮೇಶ್​ ಹಾಗೂ ಡಿಆರ್​ ಪೇದೆ ಸಂತೋಷ್​ ಅವರನ್ನು ಅಮಾನತು ಮಾಡಿ ಎಸ್ಪಿ ಆದೇಶಿಸಿದ್ದಾರೆ.