ಜಿಲ್ಲೆ

ಗುಂಡಿಕ್ಕಿಕೊಂಡ ಕೆಎಸ್ಸಾರ್ಪಿ ಪೇದೆ

kumarvrl

ಬೆಂಗಳೂರು: ರಾಜ್ಯ ಮೀಸಲು ಪೊಲೀಸ್ ಪಡೆಯ (ಕೆಎಸ್​ಆರ್​ಪಿ) ಕರ್ತವ್ಯನಿರತ ಮುಖ್ಯಪೇದೆ ಬಂದೂಕಿನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

3ನೇ ಬೆಟಾಲಿಯನ್​ನ ಮುಖ್ಯಪೇದೆ ಹುಚ್ಚೇಗೌಡ (51) ಮೃತ ವ್ಯಕ್ತಿ. ಗುರುವಾರ (ಮಾ.26) ಬೆಳಗಿನ ಜಾವ 4.30ರಲ್ಲಿ ಮಡಿವಾಳದ ಕೆಎಸ್​ಆರ್​ಪಿ ಶಸ್ತ್ರಾಸ್ತ್ರ, ಮದ್ದು ಗುಂಡುಗಳ ಉಗ್ರಾಣದಲ್ಲಿನ ಕಚೇರಿಯಲ್ಲಿ ಬಂದೂಕಿನಿಂದ ಗುಂಡಿಕ್ಕಿಕೊಂಡಿದ್ದಾರೆ. ಈ ಕುರಿತು ಮಡಿವಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಶಸ್ತ್ರಾಸ್ತ್ರ ಕೋಠಿಯ ಕಾವಲಿಗೆ ಬುಧವಾರ ರಾತ್ರಿ ಪಾಳಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಹುಚ್ಚೇಗೌಡ, ಕಚೇರಿಯ ಕೊಠಡಿಯಲ್ಲಿದ್ದರು. ಇಬ್ಬರು ಪೇದೆಗಳು ಕಚೇರಿಯ ಹೊರಗಡೆ ಸೆಂಟ್ರಿ ಕೆಲಸದಲ್ಲಿದ್ದರು. ನಸುಕಿನ 4.30ರಲ್ಲಿ ಕೊಠಡಿಯಲ್ಲಿ ಗುಂಡು ಸಿಡಿದ ಶಬ್ದ ಕೇಳಿಬಂದಿದೆ. ಹೊರಗಡೆ ಇದ್ದ ಸಿಬ್ಬಂದಿ ಕೂಡಲೇ ಒಳಹೋಗಿ ನೋಡಿದಾಗ ಎಸ್​ಎಲ್​ಆರ್ ಬಂದೂಕಿನಿಂದ ತಲೆಗೆ ಗುಂಡಿಕ್ಕಿಕೊಂಡಿರುವುದು ಕಂಡುಬಂದಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಆಂಬುಲೆನ್ಸ್​ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹುಚ್ಚೇಗೌಡ ಕೆಎಸ್​ಆರ್​ಪಿ ವಸತಿ ಗೃಹದಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆ ನೆಲೆಸಿದ್ದರು. ಪುತ್ರ ಎಂಟೆಕ್ ಪದವೀಧರ, ಪುತ್ರಿ ಬಿಇ ವ್ಯಾಸಂಗ ಮಾಡಿದ್ದಾರೆ. ಸ್ನೇಹಪರ ವ್ಯಕ್ತಿತ್ವದವರಾಗಿದ್ದು, ಒಳ್ಳೆಯ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಿರಿಯ ಅಧಿಕಾರಿಗಳ ಭೇಟಿ

ಕೆಎಸ್​ಆರ್​ಪಿ ಎಡಿಜಿಪಿ ಅಲೋಕ್ ಕುಮಾರ್ ಹಾಗೂ ಎಸ್​ಪಿ ಗಿರೀಶ್ ಸ್ಥಳಕ್ಕೆ ಭೇಟಿ ಪರಿಶೀಲಿಸಿದ್ದಾರೆ. ಹುಚ್ಚೇಗೌಡ ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ. ಅಲ್ಲದೆ, ಡೆತ್​ನೋಟ್ ಪತ್ತೆಯಾಗಿಲ್ಲ. ಕುಟುಂಬಸ್ಥರಿಂದ ಹೇಳಿಕೆ ಪಡೆದು ಮುಂದಿನ ತನಿಖೆ ಕೈಗೊಳ್ಳಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.