ಕೊಟ್ಟೂರಿನಲ್ಲಿ ಜೆಡಿಎಸ್ ಕಾರ್ಯಕರ್ತರು ನೇಮಿರಾಜ್ ನಾಯ್ಕ ಗೆಲುವು ಸಾಧಿಸುತ್ತಿದ್ದಂತೆ ಎಂ.ಎಂ.ಜೆ. ಹರ್ಷವರ್ಧನ್ ನೇತೃತ್ವದಲ್ಲಿ ಕೊಟ್ಟೂರೇಶ್ವರ ಸ್ವಾಮಿ ದೇವಾಲಯದ ಮುಂದೆ ತೆಂಗಿನಕಾಯಿ ಒಡೆದು ಭಕ್ತಿ ಸಮರ್ಪಿಸಿದರು. 
ಜಿಲ್ಲೆ

ಕೊಟ್ಟೂರೇಶ್ವರಸ್ವಾಮಿಗೆ 501 ತೆಂಗಿನಕಾಯಿ ಅರ್ಪಣೆ

ರುದ್ರಪ್ಪ ವಾಲಿ

ಕೊಟ್ಟೂರು: ಹಗರಿಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನೇಮಿರಾಜ ನಾಯ್ಕ ಗೆಲ್ಲುತ್ತಿದ್ದಂತೆ ಶನಿವಾರ ಎಂ.ಎಂ.ಜೆ. ಹರ್ಷವರ್ಧನ ನೇತೃತ್ವದಲ್ಲಿ ಕೊಟ್ಟೂರೇಶ್ವರ ಸ್ವಾಮಿ ದೇಗುಲದ ಮುಂದೆ 501 ತೆಂಗಿನಕಾಯಿ ಒಡೆದು ಸಂಭ್ರಮಿಸಿದರು.

ನೂರಾರು ಜೆಡಿಎಸ್ ಕಾರ್ಯಕರ್ತರು ಸ್ಪರ್ಧೆಗೆ ಇಳಿದವರಂತೆ ತಾಮುಂದು ನಿಮುಂದು ಎಂದು ತೆಂಗಿನಕಾಯಿಗಳನ್ನು ದೇಗುಲದ ಮುಂದೆ ಇರುವ ಓಂ ಶಬ್ದವಿರುವ ಕಲ್ಲಿಗೆ ಹೊಡೆದು ಜೈಕಾರ ಹಾಕಿ ದೇವರಿಗೆ ನಮಿಸಿದರು.
ಇದಕ್ಕೂ ಮೊದಲು ಎಂ.ಎಂ.ಜೆ. ಹರ್ಷವರ್ಧನ ಮನೆ ಮುಂದೆ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿ ನಂತರ ಬೈಕ್ ರ‌್ಯಾಲಿ ಸಮೇತ ಕೊಟ್ಟೂರೇಶ್ವರ ಸ್ವಾಮಿ ದೇವಾಲಯಕ್ಕೆ ಆಗಮಿಸಿದರು.

ಜೆಡಿಎಸ್ ನಿಂದ ಸ್ಪರ್ಧಿಸಿ ಗೆಲವು

ಹಗರಿಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರ ಸ್ಥಾಪನೆಯಾದಗ ಬಿಜೆಪಿಯಿಂದ ಮೊದಲ ಶಾಸಕರಾಗಿ ನೇಮಿರಾಜ್ ನಾಯ್ಕ ಆಯ್ಕೆಯಾಗಿದ್ದರು. ನಂತರ ಎರಡು ಸಾರಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಈಗ ಜೆಡಿಎಸ್ ನಿಂದ ಸ್ಪರ್ಧಿಸಿ ಗೆಲವು ಸಾಧಿಸಿದ್ದಾರೆ.

ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಭೀಮಾನಾಯ್ಕ ಒಂದು ಭಾರಿ ಗೆಲವು ಸಾಧಿಸಿದ್ದರು. ಈಗ ನೇಮಿರಾಜ್ ನಾಯ್ಕ ಗೆಲವು ಸಾಧಿಸಿರುವುದರಿಂದ ಜೆಡಿಎಸ್‌ಗೆ ಎರಡನೇ ಗೆಲುವಾಗಿದೆ.

ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ 22 ಕೆರೆಗಳಿಗೆ ನೀರು ತುಂಬಿಸುವ ಬೃಹತ್ ಯೋಜನೆ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ನೆನಗುದಿಗೆ ಬಿದ್ದಿದ್ದು, ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಜೆಡಿಎಸ್ ಪಕ್ಷದಿಂದ ಗೆದ್ದಿರುವ ನೇಮಿರಾಜ್ ನಾಯ್ಕ, ಈ ಯೋಜನೆಗೆ ಕಾಂಗ್ರೆಸ್ ಸರ್ಕಾರದಿಂದ 376 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಬೇಕಿದೆ.