ಹ್ಯಾಳ್ಯಾ ಗ್ರಾಮದಲ್ಲಿ ಹಳೆಯ ವಿದ್ಯಾರ್ಥಿಗಳು ಭಾನುವಾರ ಗುರುವಂದನಾ ಕಾರ್ಯಕ್ರಮ ನಿಮಿತ್ತ ಶಿಕ್ಷಕರನ್ನು ಟ್ರಾೃಕ್ಟರ್‌ನಲ್ಲಿ ಕೂಡಿಸಿ ನಡೆಸಿದ ಮೆರವಣಿಗೆ ಎಲ್ಲರ ಗಮನ ಸೆಳೆಯಿತು. ಶಿಕ್ಷಕ ಈಶ್ವರಪ್ಪ ತುರುಕಾಣಿ, ಬಸವರಾಜಪ್ಪ, ಚಂದ್ರಗೌಡ, ಪ್ರಭಾಕರ್ ಇತರರಿದ್ದರು. 
ಜಿಲ್ಲೆ

ಟ್ರ್ಯಾಕ್ಟರ್‌ಗಳಲ್ಲಿ ಗುರುಗಳ ಮೆರವಣಿಗೆ, ಹಳೆಯ ವಿದ್ಯಾರ್ಥಿಗಳಿಂದ ಗೌರವ

Kopala - Desk - Eraveni

ಕೊಟ್ಟೂರು: ಹ್ಯಾಳ್ಯಾ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಓದಿ, ಬದುಕು ರೂಪಿಸಿಕೊಂಡ ಹಳೆಯ ವಿದ್ಯಾರ್ಥಿಗಳು ಭಾನುವಾರ ಗುರುವಂದನಾ ಕಾರ್ಯಕ್ರಮ ಆಯೋಜಿಸಿದ್ದಲ್ಲದೆ ನಿವೃತ್ತರು ಮತ್ತು ಹಾಲಿ ಸೇರಿ 50ಕ್ಕೂ ಹೆಚ್ಚು ಶಿಕ್ಷಕರನ್ನು ಐದು ಟ್ರ್ಯಾಕ್ಟರ್‌ಗಳಲ್ಲಿ ಅದ್ದೂರಿ ಮೆರವಣಿಗೆ ಮಾಡಿದರು. ದಾರಿಯುದ್ದಕ್ಕೂ ಹೂ ಮಳೆ ಸುರಿಸುವ ಮೂಲಕ ಗೌರವ ಸಲ್ಲಿಸಿದರು.

ಭಾನುವಾರ ಇಡೀ ಊರು ತಳಿರು ತೋರಣಗಳಿಂದ ಸಿಂಗಾರಗೊಂಡಿತ್ತು. ಮೆರವಣಿಗೆ ಹಾದು ಹೋಗುವ ರಸ್ತೆಯ ಎರಡೂ ಬದಿಯಲ್ಲಿ ತಮ್ಮ ತಮ್ಮ ಮನೆಗಳ ಮುಂದೆ ರಂಗೋಲಿ ಹಾಕಿ ನೆಚ್ಚಿನ ಗುರುಗಳಿಗೆ ಸ್ವಾಗತ ಕೋರಿದರು. ರಸ್ತೆ ಬದಿ ಬಾಳೆಗಿಡಗಳನ್ನು ಕಟ್ಟಿ ಶೃಂಗರಿಸಲಾಗಿತ್ತು.

ಒಂದು ಫರ್ಲಾಂಗಿಗೂ ಹೆಚ್ಚು ದೂರ ಮೆರವಣಿಗೆ ಸಾಗಿತು. ಪಟಾಕಿ ಸಿಡಿಸಿ ಊರಲ್ಲಿ ಹಬ್ಬದ ವಾತಾವರಣ ಸೃಷ್ಟಿಸಲಾಗಿತ್ತು. ಹಳೆಯ ವಿದ್ಯಾರ್ಥಿನಿಯರು ಒಂದೇ ಮಾದರಿಯ ಸೀರೆಯಲ್ಲಿ ಕಂಗೊಳಿಸಿದರೆ, ವಿದ್ಯಾರ್ಥಿಗಳು ಬಿಳಿ ಶರ್ಟ್, ಮೇರೂನ್ ಕಲರ್ ಪ್ಯಾಂಟ್ ಧರಿಸಿದ್ದು, ವೇದಿಕೆ ಮದುವೆ ಮಂಟಪದಂತೆ ರಂಗೇರಿತ್ತು..

ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಿಕ್ಷಕ ಈಶ್ವರಪ್ಪ ತುರುಕಾಣಿ, ಹೆತ್ತವರು ಜನ್ಮ ನೀಡಿದರೆ, ಶಿಕ್ಷಕರು ಜ್ಞಾನ ದೀಕ್ಷೆ ನೀಡಿ ವಿದ್ಯಾರ್ಥಿಗಳನ್ನು ಸಂಸ್ಕಾರವಂತರನ್ನಾಗಿ ಮಾಡುತ್ತಾರೆ. ಬದುಕಿನಲ್ಲಿ ತಂದೆ-ತಾಯಿ ಮೊದಲಿಗರಾದರೆ, ಗುರುಗಳು ನಂತರ ಸ್ಥಾನದಲ್ಲಿ ಮತ್ತು ನಿಮ್ಮ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿರುತ್ತಾರೆ. ಅದಕ್ಕಾಗಿಯೆ ಗುರುಗಳನ್ನು ಸಕಲ ಜ್ಞಾನಿ ಬ್ರಹ್ಮನಿಗೆ ಹೋಲಿಸುವುದು ಎಂದರು.

ಹ್ಯಾಳ್ಯಾ ಗ್ರಾಮಸ್ಥರು ಶೈಕ್ಷಣಿಕ ಪ್ರಗತಿಗೆ ನೀಡುವ ಉತ್ತೇಜನ, ಮಕ್ಕಳ ವಿದ್ಯಾಭ್ಯಾಸಕ್ಕೆ ಅವರು ತೋರುತ್ತಿದ್ದ ಆಸಕ್ತಿಯನ್ನು ಶಿಕ್ಷಕರಾದ ಕೆ.ಬಸವರಾಜಪ್ಪ, ಚಂದ್ರೇಗೌಡ, ವೀರಭದ್ರಪ್ಪ, ಪ್ರಭಾಕರ ಸ್ಮರಿಸಿದರು.

ಹಳೆಯ ವಿದ್ಯಾರ್ಥಿಗಳು, ಬಾಲ್ಯದಲ್ಲಿ ಶಿಕ್ಷಕರು ಬೋಧಿಸಿದ ಪಾಠ, ಹೇಳಿಕೊಟ್ಟ ಹಿತವಚನ, ಸಮಾಜಮುಖಿ ಚಿಂತನೆಗಳು, ಅಂದಿನ ಶಿಕ್ಷಣದ ಪ್ರಗತಿ, ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ ರಾಜ್ಯ-ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಿದ್ದು, ಕ್ರೀಡೆಯಲ್ಲಿ ವಿಕ್ರಮ ಸಾಧಿಸಿದ್ದನ್ನು ನೆನಪು ಮಾಡಿಕೊಂಡರು. ಎಚ್.ವೀರೇಶ, ಮಂಗಳಾ, ಕೊಟ್ರೇಶ ಸ್ವಾಗತಿಸಿದರು. ವೀರಣ್ಣ, ನಾಗರತ್ನಮ್ಮ ನಿರೂಪಿಸಿದರು. ಹರೀಶ ವಂದಿಸಿದರು.