ವಿಜಯವಾಣಿ ಸುದ್ದಿಜಾಲ ಕುಂದಾಪುರ
ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಭಾನುವಾರ ವೈಭವದ ಬ್ರಹ್ಮರಥೋತ್ಸವಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು.
ಕೋಟೇಶ್ವರ ಕೊಡಿಹಬ್ಬಕ್ಕಾಗಿ ಭಾನುವಾರ ನಸುಕಿನಿಂದಲೆ ಧಾರ್ಮಿಕ ಆಚರಣೆಗೆ ತೊಡಗಿದ ಭಕ್ತರು, ಬೆಳಗ್ಗೆ 11.50ರ ಮಕರ ಲಗ್ನದಲ್ಲಿ ನಡೆದ ಮನ್ಮಹಾರಥೋತ್ಸವದ ಆರೋಹಣವನ್ನು ಕಣ್ಮನ ತುಂಬಿಕೊಂಡರು. ತಂತ್ರಿ ಪ್ರಸನ್ನಕುಮಾರ ಐತಾಳ್ ನೇತೃತ್ವದಲ್ಲಿ ಧಾರ್ಮಿಕ ವಿಧಿ ನಡೆಸಲಾಯಿತು. ಅರ್ಚಕರಾದ ಪರಮೇಶ್ವರ ಐತಾಳ್, ವಿಶ್ವೇಶ್ವರ ಉಡುಪ, ಶ್ರೀಪತಿ ಐತಾಳ್ ಇದ್ದರು.
ಕೋಟಿ ತೀರ್ಥ ಸರೋವರದಲ್ಲಿ ಶುಚಿಭೂತರಾಗಿ ದೇವಸ್ಥಾನಕ್ಕೆ ಬರುವ ಭಕ್ತರು ಸರೋವರದ ಸುತ್ತ ಅಪೇಕ್ಷಿತರು ಹಾಸಿದ ಬಿಳಿ ಬಟ್ಟೆಯ ಮೇಲೆ ಮುಡಿ ಅಕ್ಕಿ ಚೆಲ್ಲುವ ಪಾರಂಪರಿಕ ಸುತ್ತಕ್ಕಿ ಸೇವೆಯಲ್ಲಿ ಪಾಲ್ಗೊಂಡ ಬಳಿಕ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಸಂಜೆ ಬ್ರಹ್ಮರಥದ ಅವರೋಹಣ ನಡೆಸಿ ಉತ್ಸವ ಮೂರ್ತಿಯನ್ನು ಮರಳಿ ದೇವಸ್ಥಾನಕ್ಕೆ ಕೊಂಡೊಯ್ಯಲಾಯಿತು. ದೇವಸ್ಥಾನ ಆಡಳಿತಾಧಿಕಾರಿ, ತಹಸೀಲ್ದಾರ್ ಎಚ್.ಎಸ್.ಶೋಭಾಲಕ್ಷ್ಮೀ, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾದ ಮಾರ್ಕೋಡು ಗೋಪಾಲಕೃಷ್ಣ ಶೆಟ್ಟಿ, ಎಂ.ಪ್ರಭಾಕರ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಮಾಜಿ ಅಧ್ಯಕ್ಷ ಕೋಣಿ ಕೃಷ್ಣದೇವ ಕಾರಂತ್, ಭೂಅಭಿವೃಧ್ಧಿ ಬ್ಯಾಂಕ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಮೀನುಗಾರಿಕಾ ನಿಗಮ ಮಾಜಿ ಅಧ್ಯಕ್ಷ ಬಿ.ಹಿರಿಯಣ್ಣ ಚಾತ್ರಬೆಟ್ಟು, ಕೋಟೇಶ್ವರ ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣ ಗೊಲ್ಲ, ಸದಸ್ಯ ಲೋಕೇಶ್ ಅಂಕದಕಟ್ಟೆ, ತಾಲ್ಲೂಕು ಬಿಲ್ಲವ ಸೇವಾ ಸಮಾಜ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ, ರಥಶಿಲ್ಪಿ ರಾಜಗೋಪಾಲ ಆಚಾರ್ಯ, ಕೆ.ರವೀಂದ್ರ ಐತಾಳ್, ಸ್ಥಳೀಯ ಪ್ರಮುಖರಾದ ಮಾರ್ಕೋಡು ಸುಧೀರ್‌ಕುಮಾರ್ ಶೆಟ್ಟಿ, ರಮೇಶ್ ಭಟ್, ಪ್ರಶಾಂತ್ ಮೊಳಹಳ್ಳಿ, ಗುರುರಾಜ್ ಇಂಜಿನಿಯರ್, ಬುದ್ಧರಾಜ್ ಶೆಟ್ಟಿ ಮಾರ್ಕೋಡು, ಶ್ರೀನಿವಾಸ ಕುಂದರ್, ಸುರೇಶ್ ಬೆಟ್ಟಿನ್ ಇದ್ದರು.
ಕೊಡಿಹಬ್ಬಕ್ಕೆ ಬಂದ ನವವಿವಾಹಿತರು ಬದುಕಿನ ಕುಡಿಯೊಡಿಯುತ್ತದೆ ಎನ್ನುವ ನಂಬಿಕೆಯಿಂದ ಕೋಟಿತೀರ್ಥದಲ್ಲಿ ಸ್ನಾನಮಾಡಿ ದೇವರ ದರ್ಶನ ಪಡೆದು ‘ಕಬ್ಬಿನ ಕೊಡಿ’ಯನ್ನು ಮನೆಗೆ ಕೊಂಡೊಯ್ಯುವ ದೃಶ್ಯಗಳು ಸಾಮಾನ್ಯವಾಗಿದ್ದವು.
ಬೆಳಗ್ಗೆ ದೇವಸ್ಥಾನದಿಂದ ಋತ್ವೀಜರು, ಪಂಚವಾದ್ಯಗಳು, ಪಾರಂಪರಿಕ ಸೂರ್ಯ ವಾದ್ಯ, ಚೆಂಡೆ, ತಟ್ಟಿರಾಯ ಸಹಿತ ವೈಭವದ ಮೆರವಣಿಗೆಯಲ್ಲಿ ಬಂದ ಕೋಟಿಲಿಂಗೇಶ್ವರ, ಕೋಟಿಲಿಂಗೇಶ್ವರ ಗೋಳೆ (ಮುಖವಾಡ), ತಾಂಡವೇಶ್ವರ ಹಾಗೂ ಬಿದಿರಿನ ಕೊಡಿಯನ್ನು ಬ್ರಹ್ಮರಥದಲ್ಲಿ ಕುಳ್ಳಿರಿಸಿದ ಬಳಿಕ ಹಣ್ಣುಕಾಯಿ ಸೇವೆ ಸಲ್ಲಿಸಿ, ಬಳಿಕ ಮಂಗಳಾರತಿ ನೆರವೇರಿಸಲಾಯಿತು. ನಂತರ ರಥ ಬೀದಿಯಲ್ಲಿ ರಥ ಎಳೆಯುವ ಮೂಲಕ ರಥೋತ್ಸವ ಆಚರಿಸಲಾಯಿತು.