ಕಂಪ್ಲಿ: ತಾಲೂಕಿನ ಸೋಮಲಾಪುರ ಗ್ರಾಮದಲ್ಲಿ ಕೆಂಪು ಕೋತಿಗಳು ಬಾಲಕನಿಗೆ ಸೇರಿ ಐವರಿಗೆ ಕಚ್ಚಿ ಗಾಯಗೊಳಿಸಿದ ಘಟನೆ ಸೋಮವಾರ ನಡೆದಿದೆ.
ಗ್ರಾಮದ ಮರಿಯಪ್ಪನ ಬಾವಿ ಓಣಿಯಲ್ಲಿ ಶಾಲೆಗೆ ಹೊರಟಿದ್ದ ಐದನೇ ತರಗತಿ ಬಾಲಕ ಖಾಸಿಂಗೆ ಎಡಕೈ ಬೆರಳುಗಳಿಗೆ ಕೋತಿಯೊಂದು ಕಚ್ಚಿ ಗಾಯಗೊಳಿಸಿದೆ. ಚಿಕಿತ್ಸೆಗಾಗಿ ಬಾಲಕನನ್ನು ಕಂಪ್ಲಿಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಿಸಲಾಗಿದೆ. ಇದೇ ಪ್ರದೇಶದಲ್ಲಿ ಮನೆ ಮುಂದೆ ಕುಳಿತಿದ್ದ ವೃದ್ಧೆ ಲಕ್ಷ್ಮಮ್ಮ, ಮಲ್ಲಮ್ಮ, ಗೌರಮ್ಮ ಗಾದೆಪ್ಪ ಅವರಿಗೆ ಮೈ ಕೈಗೆ ಕೋತಿ ಪರಚಿದೆ. ಇದರಿಂದ ಗ್ರಾಮಸ್ಥರು ಭಯಭೀತಗೊಂಡಿದ್ದಾರೆ.
ಗ್ರಾಮದಲ್ಲಿ 100ರಿಂದ 150 ಕೆಂಪು ಕೋತಿಗಳ ಹಿಂಡು ಬೀಡು ಬಿಟ್ಟಿದೆ. ಕೋತಿಗಳು ಬಾಗಿಲು ತೆರೆದ ಮನೆಯೊಳಗೆ ನುಗ್ಗಿ ವಿಪರೀತ ದಾಂಧಲೆ ಮಾಡುತ್ತಿವೆ.ಅಲ್ಲದೆ ಮನುಷ್ಯರ ಮೇಲೂ ದಾಳಿ ಮಾಡುತ್ತಿವೆ. ಕೋತಿಗಳ ಹಾವಳಿ ತಡೆಯುವಂತೆ ಗ್ರಾಮಪಂಚಾಯಿತಿ ಸದಸ್ಯರ ಸಭೆಯಲ್ಲಿ ಗಮನಕ್ಕೆ ತರಲಾಗಿದೆ. ಕೆಲ ದಿನಗಳ ಹಿಂದೆ ಅರಣ್ಯ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ. ಆದರೆ ಕೋತಿಗಳ ಹಾವಳಿ ನಿಯಂತ್ರಣವಾಗಿಲ್ಲ. ಗ್ರಾಮಾಡಳಿತ ಮತ್ತು ಅರಣ್ಯ ಇಲಾಖೆಯವರು ಕೆಂಪು ಕೋತಿಗಳನ್ನು ಸೆರೆ ಹಿಡಿದು ದೂರ ಸಾಗಿಸಬೇಕು ಎಂದು ಗ್ರಾಪಂ ಸದಸ್ಯರಾದ ವೇಷಗಾರ ಮಾರೇಶ್, ಫಕೂರ್‌ಬೀ ತಿಳಿಸಿದ್ದಾರೆ.
ದೇವಲಾಪುರ ಪಿಡಿಒ ಕೆ.ಎಚ್.ಶಶಿಕಾಂತ ಪ್ರತಿಕ್ರಿಯಿಸಿ ಮಾತನಾಡಿ, ಸೋಮಲಾಪುರ ಗ್ರಾಮದಲ್ಲಿ ಕೆಂಪು ಕೋತಿಗಳ ಹಾವಳಿ ನಿಯಂತ್ರಣಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಅರಣ್ಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.