ಕೋಟ: ಸಾಲಿಗ್ರಾಮ ಪಟ್ಟಣಪಂಚಾಯಿತಿ ವ್ಯಾಪ್ತಿಯ ಹೃದಯ ಭಾಗದಲ್ಲಿ ಸುಮಾರು 5.20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಮೀನುಮಾರುಕಟ್ಟೆ ಮಂಗಳವಾರ ಉದ್ಘಾಟನೆಗೊಂಡಿದೆ. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯಿಂದ ದುಸ್ಥಿತಿಗೆ ತಲುಪಿದ್ದ ಮೀನುಮಾರುಕಟ್ಟೆಗೆ ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಸ್ವತಃ ಸ್ಥಳಕ್ಕಾಗಮಿಸಿ ಮಹಿಳಾ ಮೀನು ಮಾರಾಟಗಾರರ ಸಮಸ್ಯೆ ಆಲಿಸಿ ವೈಯಕ್ತಿಕವಾಗಿ 2ಲಕ್ಷ ರೂ. ವೆಚ್ಚ ಭರಿಸುವುದರ ಜತೆಗೆ ಪಟ್ಟಣಪಂಚಾಯಿತಿ ಅನುದಾನದ ಮೂಲಕ ಶೀಘ್ರ ಮಾರುಕಟ್ಟೆ ನಿರ್ಮಿಸಲು ನಿರ್ದೇಶಿಸಿದ್ದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಲತಾ ಹೆಗ್ಡೆ ಹಾಗೂ ಸದಸ್ಯ ರಾಜು ಪೂಜಾರಿಯವರ ಮುತುವರ್ಜಿಯಲ್ಲಿ ಪೇಟೆ ವಾರ್ಡ್ ಸದಸ್ಯೆ ರತ್ನನಾಗರಾಜ್ ಗಾಣಿಗರ ಸಲಹೆ ಪಡೆದು ಈಗ ಮಾರುಕಟ್ಟೆ ಸಿದ್ಧಗೊಂಡು ಮಂಗಳವಾರ ವ್ಯವಹಾರಕ್ಕೆ ಅಣಿಯಾಯಿತು. ಕೋವಿಡ್ ನಿಯಮದ ಹಿನ್ನೆಲೆಯಲ್ಲಿ ಸರಳ ರೀತಿಯಲ್ಲಿ ಮಾರುಕಟ್ಟೆ ಉದ್ಘಾಟನೆಗೊಂಡಿತು. ಪಪಂ ಅಧ್ಯಕ್ಷೆ ಸುಲತಾ ಹೆಗ್ಡೆ, ಉಪಾಧ್ಯಕ್ಷೆ ಅನುಸೂಯ ಆನಂದರಾಮ ಹೇರ್ಳೆ, ಸ್ಥಾಯಿ ಸಮಿತಿ ಅಧ್ಯಕ್ಷ ಸಂಜೀವ ದೇವಾಡಿಗ, ಮುಖ್ಯಾಧಿಕಾರಿ ಅರುಣ್ ಬಿ, ಸದಸ್ಯರಾದ ರತ್ನನಾಗರಾಜ್ ಗಾಣಿಗ, ಭಾಸ್ಕರ್ ಬಂಗೇರ, ಮೀನು ಮಾರಾಟಗಾರ ಸಂಘದ ಗುಲಾಬಿ, ಗೀತಾ ಮತ್ತಿತರರು ಉಪಸ್ಥಿತರಿದ್ದರು.
ಗಮನಸೆಳೆದ ವಿಜಯವಾಣಿ: ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯಿಂದ ಸಾಲಿಗ್ರಾಮ ಮೀನುಮಾರುಕಟ್ಟೆ ಸಮಸ್ಯೆ ಬಗ್ಗೆ ವಿಜಯವಾಣಿ ವರದಿ ಪ್ರಕಟಿಸಿತ್ತು. ಬಳಿಕ ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ ಅವರು ಮಹಿಳಾ ಮೀನುಗಾರರಿಗೆ ಸೂಕ್ತ ಮಾರುಕಟ್ಟೆ ನಿರ್ಮಿಸಲು ಆಗ್ರಹಿಸಿ ತಾತ್ಕಾಲಿಕ ಮಾರುಕಟ್ಟೆ ಸಿದ್ಧಗೊಳ್ಳುವವರೆಗೆ ಮಾರುಕಟ್ಟೆ ಕೆಡವದಿರುವಂತೆ ಹೆದ್ದಾರಿ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದರು. ನಂತರ ಸ್ಥಳೀಯ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮಧ್ಯಪ್ರವೇಶಿಸಿ ಶೀಘ್ರ ಮಾರುಕಟ್ಟೆ ನಿರ್ಮಿಸಲು ಸೂಚಿಸಿದರು. ಅದಾಗಿಯೂ ಮಾರುಕಟ್ಟೆ ನಿರ್ಮಾಣದಲ್ಲಿ ವಿಳಂಬ ನೀತಿಯ ಕುರಿತು ಪತ್ರಿಕೆ ವರದಿ ಪ್ರಕಟಿಸಿತ್ತು. ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಅಧಿಕಾರಿಗಳ ಗಮನಸೆಳೆದ ವಿಜಯವಾಣಿ, ಪಟ್ಟಣಪಂಚಾಯಿತಿ, ಜನಪ್ರತಿನಿಧಿಗಳಿಗೆ ಮಹಿಳಾ ಮೀನುಮಾರಾಟಗಾರರಾದ ಗೀತಾ ಕೃತಜ್ಞತೆ ಸಲ್ಲಿಸಿದ್ದಾರೆ.