ಜಿಲ್ಲೆ

ಇಲಾಖೆಯಿಂದ ಸರ್ಕಾರಿ ಸವಲತ್ತು : ಮಾಹಿತಿ ನೀಡಲು ಆಗ್ರಹ : ಕೊರಗ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಮನವಿ

ಸೌಮ್ಯ ಆರ್

ಬಂಟ್ವಾಳ: ಆದಿವಾಸಿ ಕೊರಗ ಸಮುದಾಯದ ಜನರಿಗೆ ಎಲ್ಲ ಬಗೆಯ ಮೂಲ ದಾಖಲಾತಿ ಒದಗಿಸುವ ನಿಟ್ಟಿನಲ್ಲಿ ತಾಲೂಕು ಮಟ್ಟದ ಅಧಿಕಾರಿಗಳನ್ನೊಳಗೊಂಡ ಕೊರಗ ಸಮುದಾಯದ ಮೊದಲ ವಿಶೇಷ ಸಭೆ(ಅದಾಲತ್) ಆ.7ಕ್ಕೆ ತಾಲೂಕಿನ ವೀರಕಂಭ ಗ್ರಾ.ಪಂ.ಸಭಾಭವನದಲ್ಲಿ ನಡೆಸಲು ಮಂಗಳವಾರ ಬಂಟ್ವಾಳ ತಾಪಂನ ಎಸ್‌ಜಿಎಸ್ ವೈ ಸಭಾಂಗಣದಲ್ಲಿ ಬಂಟ್ವಾಳ ತಾಲೂಕು ಕೊರಗ ಅಭಿವೃದ್ಧಿ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು.

ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಸಮುದಾಯದ ಆರೋಗ್ಯ ತಪಾಸಣೆ, ಪೊಲೀಸ್ ಇಲಾಖೆಯಿಂದ ಕಾನೂನು ಮಾಹಿತಿ ಸಹಿತ ವಿವಿಧ ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಒದಗಿಸುವಂತೆ ಸಮುದಾಯದ ಮುಖಂಡ ಸುಂದರ್ ಬೆಳುವಾಯಿ ಮನವಿ ಮಾಡಿದರು.

ನಿಮ್ಮ ಸಮಸ್ಯೆ ನಮಗೆ ಬೇಡ!: ಸಂಚಾರಿ ಆರೋಗ್ಯ ಘಟಕಕ್ಕೆ ವೈದ್ಯರ ಹುದ್ದೆ ಖಾಲಿ ಇದೆ. ಹಾಗೆಯೇ ವಾಹನವಿದ್ದರೂ ಅದಕ್ಕೆ ಚಾಲಕನಿಲ್ಲದೆ ಸಮಸ್ಯೆಯಾಗಿದೆ. ಅವರನ್ನು ಪ್ರತಿನಿತ್ಯ ತೀರಾ ಗ್ರಾಮೀಣ ಭಾಗಕ್ಕೆ ಬಸ್‌ನಲ್ಲಿ ಕಳಿಸಲು ಸಾಧ್ಯವೇ ಎಂದು ತಾಲೂಕು ಆರೋಗ್ಯಾಧಿಕಾರಿ ಗಮನಕ್ಕೆ ತಂದರು. ಅದು ನಿಮ್ಮ ಸಮಸ್ಯೆ ಅದನ್ನು ನಮ್ಮಲ್ಲಿ ಹೇಳಿದರೆ ಏನು ಪ್ರಯೋಜನ ಸರ್ಕಾರ, ಜಿಲ್ಲಾಮಟ್ಟದ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಿಕೊಳ್ಳಿ ಎಂದು ಸುಂದರ್ ತಿರುಗೇಟು ನೀಡಿದರು.

ಸುರಕ್ಷಾಧಿಕಾರಿ ಪ್ರತಿಕ್ರಿಯಿಸಿ ಆರೋಗ್ಯ ತಪಾಸಣೆಗೊಳಪಡಿಸಿದಾಗ ಹಲವರಿಗೆ ಬಿ.ಪಿ., ಶುಗರ್ ಪತ್ತೆಯಾಗಿದೆ. ಪಿಎಂಜಿವೈ ಮಾಡಿಸಿಕೊಳ್ಳಲು ಹಲವರಲ್ಲಿ ಆಧಾರ್, ರೇಶನ್ ಕಾರ್ಡ್ ಇಲ್ಲ, ಇದ್ದವರದು ಒಂದಕ್ಕೊಂದು ತಾಳೆಯಾಗುತ್ತಿಲ್ಲ ಎಂದರು.

ಕ್ರಮಕ್ಕೆ ಸೂಚನೆ: ಕಾಯಿಲೆ ಬಗ್ಗೆ ವರದಿ ಇದ್ದರೆ ಅವರಿಗೆ ಸ್ಥಳೀಯ ಪ್ರಾ.ಆ.ಕೇಂದ್ರದಲ್ಲಿ ಚಿಕಿತ್ಸೆಯ ವ್ಯವಸ್ಥೆಗೆ ಕ್ರಮಕೈಗೊಳ್ಳುವಂತೆ ಸಭಾಧ್ಯಕ್ಷ ಸಚಿನ್ ಸೂಚಿಸಿದರಲ್ಲದೆ ವೈದ್ಯರ ಮತ್ತು ಚಾಲಕ ಹುದ್ದೆ ಖಾಲಿ ಇರುವ ಬಗ್ಗೆ ಪ್ರಸ್ತಾವನೆ ಕಳಿಸಲಾಗಿದೆಯೆ ಎಂದು ಪ್ರಶ್ನಿಸಿದರು. ಈಗಾಗಲೇ ಹಲವು ಬಾರಿ ಕಳಿಸಲಾಗಿದೆ ಎಂದು ಆರೋಗ್ಯಾಧಿಕಾರಿ ತಿಳಿಸಿದರು.

ಸಮಾಜಕಲ್ಯಾಣ ಇಲಾಖೆ ತಾಲೂಕು ಸಹಾಯಕ ನಿರ್ದೇಶಕಿ ವಿನಯಾ ಕುಮಾರಿ ಕೆ. ಬಿ.ಇದ್ದರು. ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ನೋಟಿಸ್ ಜಾರಿ

ಎರಡು ಸಭೆಗಳಲ್ಲಿ ತಹಸೀಲ್ದಾರರು ಗೈರು ಹಾಜರಾಗಿರುವುದಕ್ಕೆ ಸುಂದರಿ ಕನ್ಯಾನ ಅಸಮಾಧಾನ ವ್ಯಕ್ತಪಡಿಸಿದರು. ಅನಿವಾರ್ಯ ಕಾರಣದಿಂದ ಗೈರು ಆಗಿದ್ದಾರೆ ಎಂದು ಸಚಿನ್ ಕುಮಾರ್ ಸಮಜಾಯಿಷಿ ನೀಡಿದರು. ಪೂರ್ವ ಸೂಚನೆ ನೀಡದೆ ಗೈರು ಹಾಜರಾಗಿದ್ದ ಕಂದಾಯ ಇಲಾಖೆಯ ಪಡಿತರ ವಿಭಾಗದ ಹಾಗೂ ಸರ್ವೇ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸುವಂತೆ ಸಭಾಧ್ಯಕ್ಷ ಸಚಿನ್ ಸಮಾಜ ಕಲ್ಯಾಣಾಧಿಕಾರಿ ಅವರಿಗೆ ಸೂಚಿಸಿದರು.

ಮೂಲ ದಾಖಖೆಗಳ ಕೊರತೆ

ಕೊರಗ ಸಮುದಾಯದ ಯಾರೋಬ್ಬರಲ್ಲು ಯಾವುದೇ ರೀತಿಯ ಮೂಲ ದಾಖಲಾತಿಗಳೇ ಇಲ್ಲದಿದ್ದು, ಪ್ರಸ್ತಾವಿಸುತ್ತಲೇ ಬರುತ್ತಿದ್ದೇವೆ. ಆದರೆ ಅಧಿಕಾರಿಗಳ್ಯಾರು ಗಮನಹರಿಸುತ್ತಿಲ್ಲ, ನಮ್ಮಲ್ಲಿ ಸಮರ್ಪಕ ದಾಖಲೆಗಳೇ ಇಲ್ಲದಿದ್ದರಿಂದ ಸರ್ಕಾರದ ಸವಲತ್ತು ಪಡೆದುಕೊಳ್ಳಲಾಗುತ್ತಿಲ್ಲ, ಗ್ರಾಮಮಟ್ಟದಲ್ಲಿ ಸಮುದಾಯದ ಜನರಿರುವಲ್ಲೇ ತಾಲೂಕುಮಟ್ಟದ ಅಧಿಕಾರಿಗಳು ಆಗಮಿಸಿ ಅದಾಲತ್‌ನಂಥ ವಿಶೇಷ ಸಭೆ ನಡೆಸಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳವಂತೆ ಸುಂದರ್ ಆಗ್ರಹಿಸಿದರು.