ಜಿಲ್ಲೆ

Konkan Railway ನೇಪಾಳದಲ್ಲಿ ಓಡಿಸಲು 23.80 ಕೋಟಿ ರೂ. ಕಾಂಟ್ರಾಕ್ಟ್‌!!

ಕಾರವಾರ: ನೇಪಾಳದಲ್ಲಿ ರೈಲ್ವೆ ಕಾರ್ಯಾಚರಣೆ ಹಾಗೂ ನಿರ್ವಹಣೆಯ ಗುತ್ತಿಗೆಯನ್ನು ಕೊಂಕಣ ರೈಲ್ವೆ(Konkan Railway) ನವೀಕರಿಸಿಕೊಂಡಿದೆ ಎಂದು ಕೊಂಕಣ ರೈಲ್ವೆ ನಿಗಮದ ಚೇರ್ಮನ್ ಸಂತೋಷ ಕುಮಾರ್ ಝಾ ತಿಳಿಸಿದ್ದಾರೆ. ಮುಂಬೈನ ನಿಗಮದ ಕೇಂದ್ರ ಕಚೇರಿಯಲ್ಲಿ ಭಾನುವಾರ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಿಗಮದ ವರ್ಷದ ಸಾಧನೆಗಳ ಬಗ್ಗೆ ಅವರು ಪ್ರಕಟಿಸಿದ ವಿಷಯಗಳನ್ನು ಕೊಂಕಣ ರೈಲ್ವೆ (Konkan Railway) ಪತ್ರಿಕಾ ಹೇಳಿಕೆಯ ಮೂಲಕ ಬಿಡುಗಡೆ ಮಾಡಿದೆ. 2022 ರಲ್ಲಿ ಕೊಂಕಣ ರೈಲ್ವೆ ನಿಗಮವು ನೇಪಾಳ ರೈಲ್ವೆ ಕಂಪನಿ ಜತೆ ಒಪ್ಪಂದ ಮಾಡಿಕೊಂಡು 5 ಡೀಸೆಲ್ ಮಲ್ಪಿಪಲ್ ಯೂನಿಟ್(ಡೆಮು)ಗಳನ್ನು ರೈಲುಗಳನ್ನು ತಯಾರಿಸಿ ಅಲ್ಲಿನ ಸರ್ಕಾರಕ್ಕೆ ಹಸ್ತಾಂತರ ಮಾಡಿತ್ತು. ಭಾರತದ ಜಯನಗರ ಹಾಗೂ ಕುರ್ತಾ ನಡುವೆ ರೈಲ್ವೆ ಸೇವೆಯನ್ನು ಪ್ರಾರಂಭಿಸಲಾಗಿತ್ತು. ಆಗ ಕಾರ್ಯಾಚರಣೆ ಮತ್ತು ನಿರ್ವಹಣೆಯ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈಗ ಜಯನಗರ-ಬಿಜಾಲಪುರ ಪ್ರದೇಶದಲ್ಲಿ ರೈಲುಗಳನ್ನು ಓಡಿಸುವುದು ಹಾಗೂ ನಿರ್ವಹಣೆಗೆ 23.80 ಕೋಟಿ ರೂ.ಗಳ ಟೆಂಡರ್ ಪಡೆಯಲಾಗಿದೆ ಎಂದು ಅವರು ತಿಳಿಸಿದರು. ಮುಖ್ಯವಾಗಿ ಕೊಂಕಣ ರೈಲ್ವೆ 1,793 ಕೋಟಿ ರೂ. ಆದಾಯವನ್ನು ರೈಲ್ವೆ ಓಡಾಟದಿಂದ ಪಡೆದಿದ್ದರೆ, 2,361 ಕೋಟಿ ರೂ.ಗಳನ್ನು ಇಂಥ ವಿವಿಧ ಯೋಜನೆಗಳಿಂದಲೇ ಪಡೆದುಕೊಂಡಿದೆ. ಕೊಂಕಣ ರೈಲ್ವೆ ಮಾರ್ಗವು ಶೇ. 85 ರಿಂದ 90 ರಷ್ಟು ರೈಲುಗಳು ವಿದ್ಯುತ್ ಚಾಲಿತವಾಗಿ ಓಡಾಟ ನಡೆಸಿದ್ದು, ಅದರಿಂದ ನಿಗಮಕ್ಕೆ 279.14 ಕೋಟಿ ರೂ. ಉಳಿತಾಯವಾಗಿದೆ. ಇದೇ ವರ್ಷ 1056 ಕೋಟಿ ರೂ.ಗಳ ವಿದ್ಯುದೀಕರಣ ಯೋಜನೆಗೆ ಕೊಂಕಣ ರೈಲ್ವೆ ಸುರಕ್ಷತಾ ಅನುಮೋದನೆ ಪಡೆದುಕೊಂಡಿದೆ. ವಿವಿಧ ರೈಲ್ವೆ ನಿಲ್ದಾಣಗಳಲ್ಲಿ ಸೋಲಾರ್ ಅಳವಡಿಸಿ, ಒಟ್ಟು 4.24 ಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸಲಾಗಿದ್ದು, ಅದರಿಂದ 55.13 ಲಕ್ಷ ರೂ. ಬಿಲ್ ಉಳಿತಾಯ ಮಾಡಲಾಗಿದೆ ಎಂದು ಕೊಂಕಣ ರೈಲ್ವೆಯ(Konkan Railway) ಹೊಸ ಯೋಜನೆಗಳ ಬಗ್ಗೆ ವಿವರ ನೀಡಿದರು.

Konkan Railway ಗೆ ದಂಡದಿಂದಲೇ 22 ಕೋಟಿ ರೂ.!!

ಕೊಂಕಣ ರೈಲ್ವೆ ಮಾರ್ಗದಲ್ಲಿ ಈ ವರ್ಷ 19,957 ಪ್ಯಾಸೆಂಜರ್ ರೈಲುಗಳು ಓಡಾಡಿವೆ. ಅದರಿಂದ 1069 ಕೋಟಿ ರೂ. ಆದಾಯ ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.8 ರಷ್ಟು ಆದಾಯ ಹೆಚ್ಚಿದೆ. 1,179 ವಿಶೇಷ ರೈಲುಗಳು ಓಡಾಡಿವೆ. ಕ್ಯೂಆರ್ ಕೋಡ್ ಮೂಲಕ ಟಿಕೆಟ್ ಬುಕ್ ಮಾಡುವ ವ್ಯವಸ್ಥೆಯಲ್ಲಿ 4.77 ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿದೆ. 2024 ರ ಜನವರಿಯಿಂದ ಡಿಸೆಂಬರ್‌ವರೆಗೆ ಟಿಕೆಟ್ ರಹಿತ ಪ್ರಯಾಣಕ್ಕೆ 2246 ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿದೆ. ದಂಡದ ಆದಾಯ ಶೇ.15 ರಷ್ಟು ಹೆಚ್ಚಿದೆ.