ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ
ಬೈಂದೂರು ವಲಯದ ಕೊಡಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಬ್ಬರು ಶಿಕ್ಷಕರನ್ನು ಏಕಕಾಲಕ್ಕೆ ವರ್ಗಾವಣೆ ಮಾಡಿರುವ ಇಲಾಖೆ ಕ್ರಮ ಖಂಡಿಸಿ ಪಾಲಕರು ಹಾಗೂ ಹಳೇ ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರಣಾಧಿಕಾರಿಗಳಿಗೆ ಘೇರಾವ್ ಹಾಕಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಕೊಡಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 46 ವಿದ್ಯಾರ್ಥಿಗಳಿದ್ದು, ಮುಖ್ಯಶಿಕ್ಷಕರು ಹಾಗೂ ಮೂವರು ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಪೈಕಿ ಇಬ್ಬರು ಶಿಕ್ಷಕರನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ ಶಿಕ್ಷಣ ಇಲಾಖೆ ಕ್ರಮ ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗೆ ಭೇಟಿ ನೀಡಿ ಶಿಕ್ಷಕರ ವರ್ಗಾವಣೆ ರದ್ದು ಮಾಡುವ ತನಕ ಹೋರಾಟ ನಡೆಸುವುದಾಗಿ ಹೇಳಿ ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ಮುಂದುವರಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಬೈಂದೂರು ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ, ಸರ್ಕಾರದ ನಿಯಮದಂತೆ ಹೆಚ್ಚುವರಿ ಶಿಕ್ಷಕರನ್ನು ಶಿಕ್ಷಕರ ಕೊರತೆ ಇರುವ ಬೇರೆ ಶಾಲೆಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ. ಈ ಶಾಲೆಯಲ್ಲಿ ಇಬ್ಬರು ಶಿಕ್ಷಕರಿಗೆ ಮಾತ್ರ ಅವಕಾಶ ಇದ್ದು, ಹೆಚ್ಚುವರಿ ಇಬ್ಬರು ಶಿಕ್ಷಕರನ್ನು ವರ್ಗಾವಣೆ ಮಾಡುವುದು ಅನಿವಾರ್ಯ ಎಂದರು.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪಾಲಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತೆರಳಲು ಅವಕಾಶ ನೀಡದೆ ಶಾಲೆಯ ಗೇಟಿನ ಬಳಿ ಪ್ರತಿಭಟನೆ ಮುಂದುವರಿಸಿದರು. ಮುಖ್ಯಶಿಕ್ಷಕರು ಸೇರಿದಂತೆ ಮೂವರು ಶಿಕ್ಷಕರು ಈ ಶಾಲೆಗೆ ಬೇಕೇ ಬೇಕು. ಇಬ್ಬರು ವರ್ಗಾವಣೆ ಮಾಡಿದರೆ ಶಾಲೆಯ ಎಲ್ಲ ಮಕ್ಕಳಿಗೆ ವರ್ಗಾವಣೆ ಪ್ರಮಾಣಪತ್ರ ನೀಡಿ, ನಾವು ಮಕ್ಕಳನ್ನು ಬೇರೆ ಶಾಲೆಗೆ ಸೇರಿಸುತ್ತೇವೆ. ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿರುವ ಸಂದರ್ಭ ಶಿಕ್ಷಕರನ್ನು ವರ್ಗಾವಣೆ ಮಾಡಿದರೆ ಮಕ್ಕಳ ಶಿಕ್ಷಣ ವ್ಯವಸ್ಥೆ ಹಳಿ ತಪ್ಪುತ್ತದೆ. ಹೀಗಾಗಿ ಇಬ್ಬರು ಶಿಕ್ಷಕರ ವರ್ಗಾವಣೆ ಕೈಬಿಡಬೇಕು ಎಂದು ಮನವಿ ಮಾಡಿದರು. ಪಾಲಕರ ಆಗ್ರಹಕ್ಕೆ ಮಣಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇಬ್ಬರು ಶಿಕ್ಷಕರ ವರ್ಗಾವಣೆಯನ್ನು ಕೈಬಿಟ್ಟು ಒಬ್ಬರನ್ನು ಮಾತ್ರ ವರ್ಗಾವಣೆ ಮಾಡುವುದಾಗಿ ಭರವಸೆ ನೀಡಿದ ಬಳಿಕ ಪಾಲಕರು ಪ್ರತಿಭಟನೆ ಹಿಂಪಡೆದರು.
ಎಸ್‌ಡಿಎಂಸಿ ಅಧ್ಯಕ್ಷೆ ಅನಿತಾ ಖಾರ್ವಿ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಂದ್ರ ಗಾಣಿಗ, ಗುಜ್ಜಾಡಿ ಗ್ರಾಪಂ ಸದಸ್ಯರಾದ ಸೀತಾರಾಮ ಗಾಣಿಗ, ರಾಜು ಪೂಜಾರಿ, ಶೇಖರ ದೇವಾಡಿಗ, ಸ್ಥಳೀಯ ಮುಖಂಡರಾದ ಹರೀಶ ಗಾಣಿಗ, ಪ್ರದೀಪ ಪೂಜಾರಿ, ಮೋಹನ ಗಾಣಿಗ, ಜಯರಾಮ ಖಾರ್ವಿ, ಮೋಹನ ಖಾರ್ವಿ, ರಾಜೇಶ ಖಾರ್ವಿ, ಕೇಶವ ಖಾರ್ವಿ ಮೊದಲಾದವರು ಇದ್ದರು.