ಮಡಿಕೇರಿ: ಜಮ್ಮು-ಕಾಶ್ಮೀರದ ಪೂಂಛ್ನಲ್ಲಿ ಸಂಭವಿಸಿದ್ದ ಸೇನಾ ವಾಹನ ಅಪಘಾತದಲ್ಲಿ (Army Vehicle Accident) ಗಂಭೀರವಾಗಿ ಗಾಯಗೊಂಡಿದ್ದ ಕೊಡಗುರಿ ಮೂಲದ ಯೋಧ ದಿವಿನ್ (28) ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮರಾಗಿದ್ದಾರೆ.
ಡಿಸೆಂಬರ್ 24ರಂದು ಪೂಂಚ್ ವಲಯದಲ್ಲಿ ಸೇನಾ ವಾಹನ ಅಪಘಾತಕ್ಕೀಡಾಗಿತ್ತು (Army Vehicle Accident). ಸುಮಾರು 300 ಅಡಿ ಆಳದ ಕಣಿವೆಗೆ ಸೇನಾ ವಾಹನ ಉರುಳಿ ಬಿದ್ದ ಪರಿಣಾಮ ಐವರು ಯೋಧರು ಹುತಾತ್ಮರಾಗಿದ್ದರು. ಇದರಲ್ಲಿ ಕರ್ನಾಟಕದ ನಾಲ್ವರು ಯೋಧರು ಸೇರಿದಂತೆ ಐವರು ಹುತಾತ್ಮರಾಗಿದ್ದರು. ಇದೀಗ ಮಡಿಕೇರಿ ಮೂಲದ ಯೋಧ ದಿವಿನ್ ಹುತಾತ್ಮರಾಗಿದ್ದು, ಮೃತರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.
ದಿವಿನ್ ಅಪಘಾತಕ್ಕೀಡಾಗಿರುವ ವಿಚಾರ ತಿಳಿದು ಕುಟುಂಬಸ್ಥರು ಶ್ರೀನಗರಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ತಾಯಿಯ ಧ್ವನಿ ಕೇಳಿ ದಿವಿನ್ ಹುಬ್ಬು ಹಾರಿಸಿ ಸ್ಪಂದಿಸಿದ್ದರು. ಇದನ್ನು ಕಂಡ ಕುಟುಂಬಸ್ಥರುದಿವಿನ್ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣಬಹುದು ಎಂದುಕೊಂಡಿದ್ದರು. ಆದರೆ, ಶ್ವಾಸಕೋಶಕ್ಕೆ ತೀವ್ರ ಪೆಟ್ಟಾಗಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ದಿವಿನ್ ಹುತಾತ್ಮಾರಾಗಿದ್ದಾರೆ. ಸೋಮವಾರ (ಡಿಸೆಂಬರ್ 30) ಅವರ ಪಾರ್ಥೀವ ಶರೀರ ಹುಟ್ಟೂರು ತಲುಪುವ ಸಾಧ್ಯತೆ ಇದೆ.
10 ವರ್ಷದ ಹಿಂದೆ ಸೇನೆ ಸೇರಿದ್ದ ದಿವಿನ್ ಅವರು ಎರಡು ತಿಂಗಳ ಹಿಂದಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 2025ರ ಫೆಬ್ರವರಿ ತಿಂಗಳಲ್ಲಿ ಮದುವೆ ಕೂಡ ನಿಶ್ಚಯವಾಗಿತ್ತು. ಇನ್ನೇನು ಲಗ್ನ ಪತ್ರಿಕೆ ಹಂಚಿಕೆ ಕಾರ್ಯ ಶುರು ಮಾಡಬೇಕೆನ್ನಷ್ಟುದರಲ್ಲೇ ದುರಂತ ನಡೆದಿದ್ದು, ಸಂಭ್ರಮಕ್ಕೂ ಮುನ್ನವೇ ಯೋಧನ ಬಾಳಲ್ಲಿ ಕ್ರೂರ ವಿಧಿ ಕೇಕೆ ಹಾಕಿದೆ. ಸೈನಿಕ ದಿವಿನ್ ಸಾವಿನ ಮೂಲಕ ಸೇನಾ ವಾಹನ ಪ್ರಪಾತಕ್ಕೆ ಬಿದ್ದ ಪ್ರಕರಣದಲ್ಲಿ ಹುತಾತ್ಮರಾದ ಯೋಧರ ಸಂಖ್ಯೆ 6ಕ್ಕೆ ಏರಿಕೆ ಆಗಿದೆ. ಅದರಲ್ಲಿ ನಾಲ್ವರು ಕರ್ನಾಟಕದವರೇ ಆಗಿರೋದು ದುರ್ವೈವದ ಸಂಗತಿಯಾಗಿದೆ.