ಬಂಟ್ವಾಳ: ಕ್ಷಯ ರೋಗಿಗಳ ಆರೋಗ್ಯ ದೃಷ್ಟಿಯಿಂದ ಪ್ರತಿ ತಿಂಗಳು ಆಹಾರದ ಕಿಟ್ ವಿತರಿಸುತ್ತಿರುವ ಸೇವಾಂಜಲಿ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯ ಎಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಉಪನಿರೀಕ್ಷಕ ಮೂರ್ತಿ ಹೇಳಿದರು.
ಕ್ಷಯಮುಕ್ತ ಭಾರತ ನಿರ್ಮಾಣ ಕಾರ್ಯಕ್ರಮದಂಗವಾಗಿ ಕೇಂದ್ರ ಸರ್ಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ವತಿಯಿಂದ ಕ್ಷಯ ರೋಗಿಗಳಿಗೆ ಆಹಾರ ದವಸ-ಧಾನ್ಯ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕ್ಷಯ ರೋಗದ ಜಾಗೃತಿ ಬಗ್ಗೆ ಹಾಗೂ ರೋಗ ನಿವಾರಣೆ ಮಾಡುವ ದೃಷ್ಟಿಯಿಂದ ಸೇವಾಂಜಲಿ ಕೇಂದ್ರ ಸರ್ಕಾರದ ಜತೆ ಕೈ ಜೋಡಿಸಿಕೊಂಡು ಕಾರ್ಯ ನಿರ್ವಹಿಸುತ್ತಿದೆ. ಕ್ಷಯ ರೋಗಿಗಳು ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.
ತುಂಬೆ ಯಾದವ ಸುವರ್ಣ, ಪುದು ಗ್ರಾಪಂ ಮಾಜಿ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಎಎಸೈ ನಾಗರಾಜ್ ಆರ್., ಪ್ರಮುಖರಾದ ಕೃಷ್ಣ ತುಪ್ಪೆಕಲ್ಲು, ನಾರಾಯಣ ಬಡ್ಡೂರು, ಕೇಶವ ದೋಟ, ವಿಕ್ರಂ ಬರ್ಕೆ, ಪ್ರಶಾಂತ್ ತುಂಬೆ, ಪದ್ಮನಾಭ ಕಿದೆಬೆಟ್ಟು, ಮಧುರಾಜ್ ಶೆಟ್ಟಿ ಉಪಸ್ಥಿತರಿದ್ದರು. ಸೇವಾಂಜಲಿ ಪ್ರತಿಷ್ಠಾನ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು.