ಶಿಶಿಲದಲ್ಲಿ ಮಂಗಳವಾರ ಸಂಜೆ ಕಿಲಮರಿತ್ತಾಯ ಜೋಡಿ ದೈವಗಳ ನೇಮೋತ್ಸವ ಜರುಗಿತು. 
ಜಿಲ್ಲೆ

ಶಿಶಿಲೇಶ್ವರ ದೇವಳದಲ್ಲಿ ಕಿಲಮರಿತ್ತಾಯ, ಕುದುರೆಮುಖ ದೈವಗಳ ನೇಮೋತ್ಸವ ಸಂಪನ್ನ

ವಿಜಯವಾಣಿ ಸುದ್ದಿಜಾಲ ಕೊಕ್ಕಡ
ಇತಿಹಾಸ ಪ್ರಸಿದ್ಧ ಶಿಶಿಲೇಶ್ವರ ಜಾತ್ರಾ ಸಂದರ್ಭ ಜೋಡಿ ಕಿಲಮರಿತ್ತಾಯ ಹಾಗೂ ಕುದುರೆಮುಖ ದೈವ ನೇಮೋತ್ಸವವು ಮಂಗಳವಾರ ಸಂಪನ್ನಗೊಂಡಿತು. ದೇವಳದ ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸಿದರು. ಬಳಿಕ ಉಗ್ರಾಣ ಮುಹೂರ್ತ ನೆರವೇರಿತು.

ನೇಮೋತ್ಸವದಂದು ಕುದುರೆಮುಖ ದೈವ, ಅಬ್ಬರದಿಂದ ಬಂದು ದೇವಸ್ಥಾನದ ಗೋಪುರದ ಬಾಗಿಲಿನಲ್ಲಿ ನರ್ತನ ಸೇವೆ ನಡೆಸಿ ಬಳಿಕ ಬಾರಣೆಗಾಗಿ ಬೇಯಿಸಿದ ಹುರುಳಿ ಸ್ವೀಕರಿಸಿತು. ನಂತರ ಕಟ್ಟು ಕಟ್ಟಳೆಯ ಪ್ರಕಾರ ದೇವರ ಕಾಣಿಕೆ ನಡೆಯಿತು. ನೇಮೋತ್ಸವದ ಬಳಿಕ ಉಗ್ರಾಣದ ಮಧ್ಯೆ ಗಣಪತಿಯನ್ನು ಸ್ಥಾಪಿಸಿ ಉಗ್ರಾಣವನ್ನು ಅಕ್ಕಿ, ಬೆಲ್ಲ, ದವಸ ಧಾನ್ಯ, ಎಣ್ಣೆಗಳಿಂದ ಸಿಂಗರಿಸಿ ಜಾತ್ರಾ ಮಹೋತ್ಸವವು ನಿರ್ವಿಘ್ನದಿಂದ ನಡೆಯಲಿ ಎಂದು ಪ್ರಾರ್ಥಿಸಲಾಯಿತು.

ಹಿನ್ನೆಲೆ

ಹಿಂದಿನ ಕಾಲದಲ್ಲಿ ಶಿಶಿಲೇಶ್ವರದಲ್ಲಿ ನಡೆಯುವ ಜಾತ್ರೆಗೆ ಘಟ್ಟ ಭಾಗದಿಂದ ಅಕ್ಕಿ, ಬೆಲ್ಲ, ಬೇಳೆ, ಎಣ್ಣೆ ಮುಂತಾದ ಆಹಾರ ಸಾಮಗ್ರಿಗಳನ್ನು ಗಾಡಿಯಲ್ಲಿ ಹೇರಿಕೊಂಡು ಬರುತ್ತಿದ್ದರು. ಇದರ ಬೆಂಗಾವಲಾಗಿ ಕುದುರೆ ಭೂತವು ಬರುತ್ತಿತ್ತು ಅನ್ನುವುದು ಇಲ್ಲಿನವರ ನಂಬಿಕೆ.