ಕುಂದಾಪುರ: ಕುಂದಾಪುರ ಪುರಸಭೆ ವ್ಯಾಪ್ತಿಯ ಖಾರ್ವಿಕೇರಿ ಪರಿಸರದ ಜನರಿಗೆ ಕಳೆದ ಕೆಲವು ದಶಕಗಳಿಂದ ವಾಸವಿದ್ದರೂ ಹಕ್ಕುಪತ್ರ ನೀಡಿಲ್ಲ. 94ಸಿಸಿ, 94ಡಿ ಹೀಗೆ ಬೇರೆ ಬೇರೆ ನಿಯಮ ಬಂದರೂ ಇಲ್ಲಿನವರಿಗೆ ವಾಸವಿರುವ ಅರ್ಧ, ಮುಕ್ಕಾಲು, ಒಂದು ಸೆಂಟ್ಸ್ ಜಾಗದ ಮನೆಯಡಿಯ ಭೂಮಿಗೂ ದಾಖಲಾತಿ ಸಿಕ್ಕಿಲ್ಲ. ಇದರಿಂದ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದು, ದಾಖಲೆಗಳಿಲ್ಲದೆ ಬದುಕುವಂತಾಗಿದೆ ಎಂದು ಕೆ.ಬಿ.ಖಾರ್ವಿ ಹೇಳಿದರು.
ಕುಂದಾಪುರ ಖಾರ್ವಿಕೇರಿಯ ಶ್ರೀ ಮಹಾಕಾಳಿ ದೇವಸ್ಥಾನದ ವಠಾರದಲ್ಲಿ ಸೋಮವಾರ ಹಕ್ಕುಪತ್ರ ಕುರಿತ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ಆರ್‌ಟಿಐ ಹೋರಾಟಗಾರ ಶರಶ್ಚಂದ್ರ ಹೆಗ್ಡೆ ಎಂ., ಸರ್ಕಾರಿ ಅಧಿಕಾರಿಗಳಿಗೆ ಸೂಕ್ತ ದಾಖಲಾತಿ, ಕಾಯ್ದೆ, ಕಾನೂನು ತಿದ್ದುಪಡಿಗಳ ಸಮಗ್ರ ಮಾಹಿತಿ ನೀಡಿದರೂ ಇಲ್ಲಿನ ಜನರಿಗೆ ಹಕ್ಕುಪತ್ರ ನೀಡಲು ವಿಳಂಬ ಮಾಡಲಾಗುತ್ತಿದೆ. ಈ ಬಗ್ಗೆ ಲೋಕಾಯುಕ್ತಕ್ಕೂ ದೂರು ಸಲ್ಲಿಸಿದ್ದೇನೆ. ಇಲ್ಲಿನ ಜನರಿಗೆ ಹಕ್ಕುಪತ್ರ ಕೊಡಿಸಲು ತನ್ನ ಬೆಂಬಲವಿದೆ ಎಂದು ತಿಳಿಸಿದರು.
ಪುರಸಭೆ ಸದಸ್ಯರಾದ ಚಂದ್ರಶೇಖರ ಖಾರ್ವಿ, ರಾಘವೇಂದ್ರ ಖಾರ್ವಿ ಮದ್ದುಗುಡ್ಡೆ, ಹಕ್ಕುಪತ್ರ ದೊರಕಿಸಿಕೊಡಲು ಪಕ್ಷಾತೀತವಾಗಿ ಹೋರಾಟ ನಡೆಸಲಾಗುವುದು ಎಂದರು. ಪುರಸಭೆ ಮಾಜಿ ಸದಸ್ಯ ಪ್ರಕಾಶ್ ಆರ್.ಖಾರ್ವಿ ಮಾತನಾಡಿದರು. ಮಹಾಕಾಳಿ ದೇವಸ್ಥಾನ ಅಧ್ಯಕ್ಷ ಅಜಂತ ಖಾರ್ವಿ, ವಿದ್ಯಾರಂಗ ಅಧ್ಯಕ್ಷ ದಾಮೋದರ ಖಾರ್ವಿ, ವಿದ್ಯಾನಿಧಿ ಅಧ್ಯಕ್ಷ ದಿನಕರ ಖಾರ್ವಿ, ರೋಹಿತ್ ಖಾರ್ವಿ, ಪುರಸಭೆ ನಾಮನಿರ್ದೇಶಿತ ಸದಸ್ಯ ಸದಾನಂದ ಖಾರ್ವಿ ಉಪಸ್ಥಿತರಿದ್ದರು.