ಜಿಲ್ಲೆ

ಚಿನ್ನದ ಗಣಿಗೇ ಕನ್ನ- ಕಳ್ಳತನಕ್ಕೆ ಇಳಿದವರ ಪೈಕಿ ಮೂವರ ಸಾವು

ಕೋಲಾರ: ಚಿನ್ನದ ಗಣಿಗೆ ಕನ್ನ ಹಾಕಲು ಹೊರಟು ಮೂವರು ಪ್ರಾಣ ಕಳೆದುಕೊಂಡ ದುರಂತ ಕೋಲಾರದ ಕೆಜಿಎಫ್ ಚಿನ್ನದ ಗಣಿಯಲ್ಲಿ ನಿನ್ನೆ ರಾತ್ರಿ ನಡೆದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಎಂಟು ಗಂಟೆ ಕಾರ್ಯಾಚರಣೆ ನಡೆಸಿ ಇಬ್ಬರ ಶವವನ್ನು ಹೊರತೆಗೆದಿದ್ದಾರೆ. ಇನ್ನೊಬ್ಬನ ಶವಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ.

ಮಾರಿಕುಪ್ಪಂ ಬಳಿ ಇರುವ ಚಿನ್ನದ ಗಣಿಯ ಗುಂಡಿಯಲ್ಲಿ ಬಿದ್ದಿದ್ದ ಕಬ್ಬಿಣ ಕಳವು ಮಾಡಲೆಂದು ಐವರ ತಂಡ ಪ್ರಯತ್ನಿಸಿತ್ತು. ಅವರು ಆ ಗುಂಡಿಗೆ ಇಳಿಯುವ ವೇಳೆ ಮೂವರು ಜಾರಿ ಬಿದ್ದಿದ್ದಾರೆ. ಮೇಲೆ ಏಳಲಾಗದೆ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಅವರು ಬಿದ್ದ ನಂತರ ಏಳಲಾಗದೆ ಒದ್ದಾಡುತ್ತಿರುವುದನ್ನು ಕಂಡು ಇನ್ನಿಬ್ಬರು ಹಿಂದೆ ಸರಿದಿದ್ದಾರೆ. ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿ ಇನ್ನೊಬ್ಬನ ಶವಕ್ಕಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಮೃತರನ್ನು ಅಂಡ್ರಸನ್ ಪೇಟೆಯ ಪಾಡಿಯಪ್ಪನ್​(39), ಜೋಸೆಫ್​ (50), ಕಂದ (29) ಎಂದು ಗುರುತಿಸಲಾಗಿದೆ. ಈ ಪೈಕಿ ಪಾಡಿಯಪ್ಪನ್ ಮೃತದೇಹಕ್ಕಾಗಿ ಈಗ ಹುಡುಕಾಟ ನಡೆದಿದೆ. ಈ ಕಳವು ಪ್ರಕರಣ ಮತ್ತು ದುರಂತಕ್ಕೆ ಸಂಬಂಧಿಸಿ ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಟ್ಟಾರೆ ಪ್ರಕರಣದ ಮಾಹಿತಿ ತನಿಖೆಯ ನಂತರವಷ್ಟೇ ಬಹಿರಂಗವಾಗಬೇಕಾಗಿದೆ.