ವಿಜಯವಾಣಿ ಸುದ್ದಿಜಾಲ ಗುರುಪುರ
ಕಳೆದ ವರ್ಷ ಮಳೆಗೆ ಗುಡ್ಡ ಕುಸಿತ ಸಂಭವಿಸಿದ್ದ ಕೆತ್ತಿಕಲ್ ಪ್ರದೇಶಕ್ಕೆ ಶುಕ್ರವಾರ ಭೇಟಿ ನೀಡಿದ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಕೆತ್ತಿಕಲ್‌ನಲ್ಲಿ ವಿಶೇಷ ತಂತ್ರಜ್ಞಾನದೊಂದಿಗೆ ವೈಜ್ಞಾನಿಕ ರೀತಿಯ ತಡೆಗೋಡೆ ನಿರ್ಮಾಣ ಕಾಮಗಾರಿ ಮಳೆಗಾಲಕ್ಕೆ ಮುಂಚಿತವಾಗಿ ಪೂರ್ಣಗೊಳಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಳೆದ ಮಳೆಗಾಲ ಕೆತ್ತಿಕಲ್ ಗುಡ್ಡ ಕುಸಿದು ಹೆದ್ದಾರಿ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿತ್ತು. ಗುಡ್ಡದ ಮೇಲ್ಭಾಗದ ಕೆಲ ಮನೆ ಖಾಲಿಗಳನ್ನು ಮಾಡಲಾಗಿತ್ತು. ಮತ್ತೊಂದೆಡೆ ಗುಡ್ಡದ ಮೇಲ್ಭಾಗದಲ್ಲಿ ಮಂಗಳೂರು ಮಹಾನಗರ ಪಾಲಿಕೆ ನಿರ್ಮಿಸುತ್ತಿದ್ದ ಕೋಟ್ಯಂತರ ರೂ. ವೆಚ್ಚದ ವೆಟ್‌ವೆಲ್ ಕೂಡ ಅಪಾಯಕ್ಕೆ ಸಿಲುಕಿತ್ತು. ಸದ್ಯ ವೆಟ್‌ವೆಲ್ ಭಾಗಕ್ಕೆ ಗುಡ್ಡದ ನೀರು ಸರಾಗವಾಗಿ ಹರಿಯಲು ಬೃಹತ್ ಚರಂಡಿ ನಿರ್ಮಿಸಲಾಗುತ್ತಿದೆ. ಈ ಕಾಮಗಾರಿ ಮಳೆಗಾಲಕ್ಕೆ ಮುಂಚಿತ ಪೂರ್ಣಗೊಳ್ಳಲಿದೆ ಎಂದು ಎನ್‌ಎಚ್ ಅಧಿಕಾರಿಗಳು ಜಿಲ್ಲಾಧಿಕಾರಿಗೆ ಮನವರಿಕೆ ಮಾಡಿದರು.
ಗ್ಯಾಬಿಯನ್ ವಾಲ್
ಕುಸಿತಗೊಂಡಿರುವ ಕೆತ್ತಿಕಲ್ ಪ್ರದೇಶದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಮೀಕ್ಷೆ ನಡೆಸಿದ್ದು, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಕಾನಿಕಲ್ ಇನ್ ಇಂಡಿಯಾ ಕಾಯಂ ಕಾಮಗಾರಿಗೆ ಮಾರ್ಗಸೂಚಿ ಹೊರಡಿಸಿದೆ. ಅದರಂತೆ ಕೆತ್ತಿಕಲ್ ಗುಡ್ಡ ಪ್ರದೇಶದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಗ್ಯಾಬಿಯನ್ ವಾಲ್(ತಡೆಗೋಡೆ) ನಿರ್ಮಿಸಲಾಗುತ್ತಿದೆ. ಇಳಿಜಾರಾದ ಗುಡ್ಡದಲ್ಲಿ 4 ಹಂತದಲ್ಲಿ ಗ್ಯಾಬಿಯನ್ ತಡೆಗೋಡೆ ನಿರ್ಮಿಸಲಾಗುತ್ತದೆ. ಈ ತಂತ್ರಜ್ಞಾನದಲ್ಲಿ ಕಬ್ಬಿಣದ ಜಾಲಿಯೊಳಗೆ ಕಲ್ಲು ತುಂಬಿಸಿ ತಡೆಗೋಡೆ ನಿರ್ಮಿಸಲಾಗುತ್ತದೆ. ಇದಕ್ಕಾಗಿ 4 ಹಂತದಲ್ಲಿ ಗುಡ್ಡವನ್ನು ಸಮತಟ್ಟುಗೊಳಿಸಲಾಗಿದೆ. ಮೇಲಿನವರೆಗೂ ಇದೇ ಮಾದರಿ ತಡೆಗೋಡೆ ನಿರ್ಮಾಣಗೊಳ್ಳಲಿದೆ. ಮೇಲ್ಭಾಗದ ಮನೆಗಳು ಮತ್ತು ರಸ್ತೆಗೆ ಯಾವುದೇ ತೊಂದರೆಯಾಗದಂತೆ ಗ್ಯಾಬಿಯನ್ ವಾಲ್ ನಿರ್ಮಾಣವಾಗಲಿದೆ. ತಡೆಗೋಡೆ ನಿರ್ಮಾಣಕ್ಕೆ ಸೂಚನೆ ಹೆದ್ದಾರಿಗೆ ಗುರುಪುರದಲ್ಲಿ ನಿರ್ಮಿಸಲಾದ ಹೊಸ ಸೇತುವೆ ಮುಂದೆ ನಿರ್ಮಾಣಗೊಂಡಿರುವ ಡಾಂಬರು ರಸ್ತೆಯ ಎರಡೂ ಪಾರ್ಶ್ವದಲ್ಲಿ ಅಗತ್ಯಕ್ಕೆ ತಕ್ಕಂತೆ ಸಿಮೆಂಟ್ ತಡೆಗೋಡೆ ಹಾಗೂ ಮಣ್ಣು ಕೊರೆದು ಹೋಗದಂತೆ ಕಲ್ಲಿನ ಹಾಸು ರಚಿಸಬೇಕು ಎಂದು ಎನ್‌ಎಚ್ ಅಧಿಕಾರಿಗಳ ಮೂಲಕ ರಾಷ್ಟ್ರೀಯ ಹೆದ್ದಾರಿ 169ರ ವಿಸ್ತರಣೆ ಕಾಮಗಾರಿ ನಡೆಸುತ್ತಿರುವ ಡಿಬಿಎಲ್ ಗುತ್ತಿಗೆ ಸಂಸ್ಥೆಗೆ ಸೂಚಿಸಿದರು. ಮನೆಗಳಿಗೆ ಅಪಾಯವಿಲ್ಲ ಗುಡ್ಡ ಕುಸಿಯುತ್ತಲೇ ಕೆತ್ತಿಕಲ್ ಮೇಲ್ಭಾಗದಲ್ಲಿ ವಾಸವಾಗಿದ್ದ ಏಳೆಂಟು ಮನೆ ಖಾಲಿ ಮಾಡಿ, ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ಮಳೆ ಪ್ರಮಾಣ ಕಡಿಮೆಯಾಗುತ್ತಲೇ ಕೆಲವರು ತಮ್ಮ ಮನೆಗಳಿಗೆ ಮರಳಿದ್ದರು. ಪ್ರಸಕ್ತ ನಡೆಯುತ್ತಿರುವ ತಡೆಗೋಡೆ ಕಾಮಗಾರಿ ಪೂರ್ಣಗೊಂಡ ಬಳಿಕ ಎಲ್ಲ ಕುಟುಂಬಗಳನ್ನು ವಾಪಸ್ ಕರೆಸಲು ವ್ಯವಸ್ಥೆ ಮಾಡಲಾಗುವುದು. ಮನೆಗಳಿರುವ ಪ್ರದೇಶ ಎತ್ತರವಾಗಿದೆ. ಹಾಗಾಗಿ ಸ್ಥಳೀಯ ಒಳರಸ್ತೆ ಎತ್ತರಕ್ಕೆ ಸಮಾನವಾಗಿ ತಡೆಗೋಡೆ ನಿರ್ಮಾಣವಾಗಲಿದ್ದು, ರಸ್ತೆ ಹಾಗೂ ಮನೆಗಳಿಗೆ ಯಾವುದೇ ಅಪಾಯ ಎದುರಾಗದು ಎಂದು ಡಿಸಿ ಹೇಳಿದರು. ಎನ್‌ಎಚ್ ಪ್ರಾಜೆಕ್ಟ್ ಡೈರೆಕ್ಟರ್ ಜಾವೇದ್ ಅಜ್ಮಿ, ಮನಪಾ ಆಯುಕ್ತ ರವಿಚಂದ್ರ ನಾಯಕ್, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು, ಡಿಬಿಎಲ್ ಸಂಸ್ಥೆ ಇಂಜಿನಿಯರ್‌ಗಳು ಮತ್ತು ಸಿಬ್ಬಂದಿ ಇದ್ದರು.
ಇನ್ನು 15-20 ದಿನದೊಳಗೆ ಗ್ಯಾಬಿಯನ್ ವಾಲ್ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ. ವಿಶೇಷ ತಂತ್ರಜ್ಞಾನದ ತಡೆಗೋಡೆ ನಿರ್ಮಾಣದಿಂದ ಕೆತ್ತಿಕಲ್ ಗುಡ್ಡ ಮತ್ತೆ ಕುಸಿಯುವ ಭೀತಿ ಇಲ್ಲ. ಒಂದು ವರ್ಷದಿಂದ ತಾತ್ಕಾಲಿಕ ಸುರಕ್ಷಾ ಕ್ರಮ ಕೈಗೊಳ್ಳಲಾಗಿದೆ. ಈಗ ಶಾಶ್ವತ ಪರಿಹಾರ ಕಾರ್ಯ ನಡೆಯುತ್ತಿದೆ. ಗುಡ್ಡದ ನೀರಿನ ಹರಿವಿಗೆ ತಡೆಯಾಗದಂತೆ ಹೆದ್ದಾರಿ ಬದಿ ಚರಂಡಿ ನಿರ್ಮಿಸಲಾಗುತ್ತಿದೆ. ಮಳೆಗಾಲಕ್ಕೆ ಮುಂಚಿತವಾಗಿ ಎಲ್ಲ ಕಾಮಗಾರಿ ಪೂರ್ಣಗೊಳ್ಳಲಿದೆ. ಮುಲ್ಲೈ ಮುಗಿಲನ್, ದ.ಕ ಜಿಲ್ಲಾಧಿಕಾರಿ