ಜಿಲ್ಲೆ

ಕಾಮೇಗೌಡರ ಕೆರೆ ಕಾಳಜಿ ಕಟ್ಟುಕಥೆ: ಏನೂ ಮಾಡದೇ ದೊಡ್ಡ ಸಾಧನೆಯ ಕಿರೀಟ

ಮಾದರಹಳ್ಳಿ ರಾಜು/ದಿವಾಕರ್ ಮಂಡ್ಯ: ಸಮಾಜದ ನಂಬಿಕೆಯನ್ನೇ ದಿಕ್ಕುತಪ್ಪಿಸುವಂಥ ಘಟನೆಗೆ ಮಂಡ್ಯ ಜಿಲ್ಲೆ ಮತ್ತೆ ಸಾಕ್ಷಿಯಾಗಿದೆ. ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಕಾಮೇಗೌಡ ಅವರು ‘ಕೆರೆ ಕಾಮೇಗೌಡ’ ಎಂದೇ ಗಳಿಸಿರುವ ಖ್ಯಾತಿ ಹಿಂದೆ ಹಲವು ಅನುಮಾನ-ಆರೋಪಗಳು ಎದ್ದಿವೆ.

ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ವ್ಯಾಪ್ತಿಗೆ ಒಳಪಟ್ಟಿರುವ, ದೇವಾಲಯದ ಹಿನ್ನೆಲೆ ಭಕ್ತಿಭಾವದ ಕೇಂದ್ರವಾಗಿರುವ ಗ್ರಾಮದ ಕುಂದನಬೆಟ್ಟದಲ್ಲಿ ಸುಮಾರು 40 ವರ್ಷಗಳಿಂದ ಪ್ರಾಣಿ-ಪಕ್ಷಿಗಳಿಗಾಗಿ ಕೆರೆ ನಿರ್ವಿುಸಿದ್ದೇನೆ. ಮರಗಿಡಗಳನ್ನು ನೆಟ್ಟಿದ್ದೇನೆ ಎಂಬುದು ಕಾಮೇಗೌಡ ಹೇಳಿಕೊಳ್ಳುವ ಸಾಧನೆ. ಈ ಬಗ್ಗೆ ಅವರ ಪರಿಚಿತರೊಬ್ಬರು ಮಾಧ್ಯಮದ ಮೂಲಕ ಜಗತ್ತಿಗೆ ಪರಿಚಯಿಸಿದರು. ನಂತರ ಅವರ ಪ್ರಸಿದ್ಧಿ ದಿನೇದಿನೆ ಬೆಳೆಯಿತು. ಪ್ರಧಾನಿ ನರೇಂದ್ರ ಮೋದಿ ‘ಮನ್ ಕೀ ಬಾತ್’ನಲ್ಲಿ ಪ್ರಸ್ತಾಪಿಸುವಷ್ಟು ಅವರ ಕೀರ್ತಿ ಹಬ್ಬಿದೆ. ಇದರಿಂದಾಗಿ ಅವರನ್ನು ಮುಖ್ಯಮಂತ್ರಿಯವರೂ ಸೇರಿ ಎಲ್ಲರೂ ಗೌರವಿಸುವಂತಾಗಿದೆ. ಆದರೆ, ಕಾಮೇಗೌಡರ ಸಾಧನೆ ಬಗ್ಗೆ ದಾಸನಹುಂಡಿ ಗ್ರಾಮದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಯಾವುದೇ ಸಾಧನೆ ಮಾಡದವರನ್ನು ದೊಡ್ಡ ವ್ಯಕ್ತಿ ಎಂಬಂತೆ ಬಿಂಬಿಸಲಾಗುತ್ತಿದೆ. ಇದನ್ನು ದುರ್ಬಳಕೆ ಮಾಡಿಕೊಂಡು ಕಾಮೇಗೌಡ ಮತ್ತವರ ಕುಟುಂಬ ವರ್ಗ ಅಧಿಕಾರಿಗಳು ಹಾಗೂ ಗ್ರಾಮಸ್ಥರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂಬ ಆರೋಪಗಳಿವೆ.

ಅರಣ್ಯದಲ್ಲಿ ಕಟ್ಟೆಗಳನ್ನು ನಿರ್ವಿುಸಿದ್ದರಿಂದ ಗೌರವ ನೀಡಲಾಗಿದೆ. ಈ ನಡುವೆ, ಗ್ರಾಮದ ಜನತೆ ದೂರು ನೀಡಿದ್ದಾರೆ. ಶೀಘ್ರವೇ ಶಾಂತಿ ಸಭೆ ನಡೆಸಿ ವಾಸ್ತವ ಸಂಗತಿ ಆಧರಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. | ಡಾ.ಎಂ.ವಿ.ವೆಂಕಟೇಶ್ ಜಿಲ್ಲಾಧಿಕಾರಿ, ಮಂಡ್ಯ ಬೆಟ್ಟದಲ್ಲಿ ಜೆಸಿಬಿಗಳಿಂದ ಕೆಲಸ ಮಾಡುವುದು ಅಪಾಯಕಾರಿ. ಅಲ್ಲಿ ದೊಡ್ಡ ಬಂಡೆಗಳಿವೆ, ಕೆಳಗೆ ಮಣ್ಣು ತುಂಬುವುದರಿಂದ ಸತತ ಮಳೆಯಾದಲ್ಲಿ ಬೆಟ್ಟ ಕುಸಿದು ಬಂಡೆಗಳು ಉರುಳಿ ಊರು ನಾಶವಾಗುವ ಆತಂಕವಿದೆ. ಈ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಅರಣ್ಯ ಇಲಾಖೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಿ. | ನಾಗರತ್ನ ಸಂಶೋಧಕರು, ಮಳವಳ್ಳಿ

ನಿಮಗೆ ಅನುಮತಿ ನೀಡಿದ್ದು ಯಾರು?

ಕುಂದನಬೆಟ್ಟಕ್ಕೆ ಯಾರೇ ಬಂದರೂ ಕಾಮೇಗೌಡ ಹಾಗೂ ಅವರ ಮಗ ಬೆದರಿಸುತ್ತಾರೆ. ಇಲ್ಲಿಗೆ ಯಾರೂ ಬರುವಂತಿಲ್ಲ, ನಾವು ಇದನ್ನು ಸಂರಕ್ಷಿಸುತ್ತೇವೆ ಎಂಬುದು ಅವರ ವಾದ. ಇದಕ್ಕೆ ನಿಮಗೆ ಅನುಮತಿ ನೀಡಿದ್ದು ಯಾರು ಎಂಬ ಪ್ರಶ್ನೆಗೆ ಅವರ ಬಳಿ ಉತ್ತರ ಇಲ್ಲ. ಜಾನುವಾರುಗಳಿಗಷ್ಟೇ ಅಲ್ಲ ಬಹಿರ್ದೆಸೆಗೆ ಹೋಗುವುದಕ್ಕೂ ಅವರು ನಿರ್ಬಂಧ ಹಾಕುತ್ತಾರೆ. ಮನೆಗಳ ಮುಂದೆ ಕಾಂಕ್ರೀಟ್ ರಸ್ತೆ, ಚರಂಡಿ ನಿರ್ಮಾಣ ನಡೆಯುತ್ತಿದೆ. ಇವರ ಗತ್ತಿಗೆ ಹೆದರಿ ಮಳವಳ್ಳಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮನೆಯ ಜಗುಲಿ ಮೇಲೆ ದಿನವಿಡೀ ಕುಳಿತು ಕಾಮಗಾರಿ ಮಾಡಿಸಿದ್ದಾರೆ ಎಂಬುದು ದೊಡ್ಡ ದುರಂತ.

ನಿತ್ಯ ಮನೆ ಬಳಿಗೆ 108

ಪ್ರಧಾನಿ ಇವರ ಹೆಸರು ಹೇಳಿದ್ದರಿಂದ ಮತ್ತು ರಾಜ್ಯ ಸರ್ಕಾರ ವಿಶೇಷ ಗೌರವ ನೀಡುತ್ತಿರುವುದನ್ನೇ ಬಂಡವಾಳ ಮಾಡಿಕೊಂಡಿರುವ ಕಾಮೇಗೌಡರು, ಆಡಳಿತ ಯಂತ್ರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅನಾರೋಗ್ಯಕ್ಕೆ ಒಳಗಾದ ಅವರ ಮನೆಗೆ ಡಿಎಚ್​ಒ ಡಾ.ಮಂಚೇಗೌಡ ಭೇಟಿ ನೀಡಿ, ಆಸ್ಪತ್ರೆಗೆ ಬನ್ನಿ ಉತ್ತಮ ಚಿಕಿತ್ಸೆ ನೀಡುತ್ತೇವೆ ಎಂದು ಗೋಗರೆದಿದ್ದಾರೆ. ಅದಕ್ಕೊಪ್ಪದೆ, ನಾನು ದೇಶದ ಆಸ್ತಿ, ಮನೆಗೆ ಬಂದು ಚಿಕಿತ್ಸೆ ಕೊಡಬೇಕೆಂದು ಆರ್ಡರ್ ಮಾಡಿದ್ದಾರೆ. ಕೋವಿಡ್ ಸೋಂಕಿತರನ್ನು ಕರೆತರಲು 108 ಇಲ್ಲದಿದ್ದರೂ, ಇವರನ್ನು ಪ್ರತಿದಿನ ಗ್ರಾಮದಿಂದ ಮಿಮ್ಸ್​ಗೆ ಕರೆತಂದು ಚಿಕಿತ್ಸೆ ಕೊಡಿಸಿ ಮನೆಗೆ ಕರೆದುಕೊಂಡು ಹೋಗಿ ಬಿಡಲು ಒಂದು 108 ವಾಹನ ಫಿಕ್ಸ್ ಮಾಡಲಾಗಿದೆ ಎಂಬುದು ಶೋಚನೀಯ ಸಂಗತಿ.

ಕುಂದನಬೆಟ್ಟವನ್ನು ಕಾಮೇಗೌಡರು ಸ್ವಂತ ಆಸ್ತಿ ಎಂಬಂತೆ ವರ್ತಿಸಿ, ಸರ್ಕಾರದ ಗೌರವ ದುರ್ಬಳಕೆ ಮಾಡಿಕೊಂಡು ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ಮಾಡಬೇಕಾಗುತ್ತದೆ. | ಕುಮಾರ್ ಗ್ರಾಪಂ ಮಾಜಿ ಅಧ್ಯಕ್ಷ ಕಾಮೇಗೌಡರು ಇತ್ತೀಚೆಗೆ ಕೆಲವು ಗಿಡಗಳನ್ನು ಪಡೆದಿದ್ದು, ವಿದ್ಯುತ್ ಲೈನ್ ಕೆಳಗೆ ನೆಟ್ಟಿದ್ದಾರೆ. ಈಗ ವೈಭವೀಕರಣ ಆಗುತ್ತಿರುವಂತೆ ಏನೂ ಬೆಳವಣಿಗೆ ಆಗಿಲ್ಲ. ಹಿಂದೆ ಗೀತಾ ಎಂಬ ಆರ್​ಎಫ್​ಒ ಸಾಕಷ್ಟು ಗಿಡಗಳನ್ನು ನೆಡಿಸಿದ್ದರು. ಅವು ಏನಾದವು ಎಂಬ ಮಾಹಿತಿ ಇಲ್ಲ. | ಆರೀಫ್ ತಾಲೂಕು ವಲಯ ಅರಣ್ಯಾಧಿಕಾರಿ