ಜಿಲ್ಲೆ

ಮೈಸೂರಿನಲ್ಲಿದೆ ಕೌಟಿಲ್ಯನ ಅರ್ಥಶಾಸ್ತ್ರ

| ಸದೇಶ್ ಕಾರ್ವಡ್, ಮೈಸೂರು

ಮೌರ್ಯ ಸಾಮ್ರಾಜ್ಯ ಸ್ಥಾಪನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಚಾಣಕ್ಯ (ಕೌಟಿಲ್ಯ)ನ ಹೆಸರು ಕೇಳದವರು ಅಪರೂಪ. ಚಾಣಕ್ಯನ ನೀತಿ ಹಲವರಿಗೆ ಇಂದಿಗೂ ಸ್ಪೂರ್ತಿದಾಯಕ. ಇಂತಹ ಮೇರು ವ್ಯಕ್ತಿತ್ವದ ಕೌಟಿಲ್ಯನು ರಚಿಸಿದ ಅರ್ಥಶಾಸ್ತ್ರದ ಮೂಲ ಪ್ರತಿ ಇರುವುದು ಮೈಸೂರಿನಲ್ಲಿ.

ಮೈಸೂರಿನ ಓರಿಯೆಂಟಲ್ ರಿಸರ್ಚ್ ಇನ್​ಸ್ಟಿಟ್ಯೂಟ್​ನಲ್ಲಿ ಗ್ರಂಥ ಲಿಪಿಯಲ್ಲಿರುವ ಕೌಟಿಲ್ಯನ ಅರ್ಥಶಾಸ್ತ್ರದ ಮೂಲ ಪ್ರತಿಯಿದೆ. ಓರಿಯೆಂಟಲ್ ರಿಸರ್ಚ್ ಇನ್​ಸ್ಟಿಟ್ಯೂಟ್ ಒಂದು ಶತಮಾನದಿಂದ ಜತನದಿಂದ ಕೌಟಿಲ್ಯನ ಅರ್ಥಶಾಸ್ತ್ರ ಪ್ರತಿಯನ್ನು ಕಾಪಾಡಿಕೊಂಡು ಬಂದಿದೆ. ಕ್ರಿ.ಪೂ. 4ನೇ ಶತಮಾನದ ಕೌಟಿಲ್ಯನ ಅರ್ಥಶಾಸ್ತ್ರ ಒಟ್ಟು 168 ತಾಳೆಗರಿಗಳನ್ನು ಹೊಂದಿದೆ. ಈ ತಾಳೆಗರಿ ಗ್ರಂಥವು 37 ಸೆಂಟಿಮೀಟರ್ ಉದ್ದ, 5 ಸೆಂಟಿಮೀಟರ್ ಅಗಲವನ್ನು ಒಳಗೊಂಡಿದೆ. ಒಂದು ಪುಟದಲ್ಲಿ 12 ಸಾಲುಗಳು, 1 ಸಾಲಿನಲ್ಲಿ 50 ಅಕ್ಷರಗಳು ಇವೆ.

ಕೌಟಿಲ್ಯನ ಅರ್ಥಶಾಸ್ತ್ರ ಕುರಿತು ಎಲ್ಲರಿಗೂ ಮಾಹಿತಿ ಇದ್ದರೂ 1905ರವರೆಗೆ ಈ ಗ್ರಂಥ ಎಲ್ಲಿದೆ ಎಂಬ ಮಾಹಿತಿ ಯಾರಿಗೂ ತಿಳಿದಿರಲಿಲ್ಲ. ತಮಿಳುನಾಡಿನ ವ್ಯಕ್ತಿಯೊಬ್ಬರ ಬಳಿ ಕೌಟಿಲ್ಯನ ಅರ್ಥಶಾಸ್ತ್ರ ಇತ್ತು. ಅದನ್ನು 1905ರಲ್ಲಿ ತಮಿಳುನಾಡಿನ ಆ ವ್ಯಕ್ತಿ ಮೈಸೂರಿನ ಓರಿಯೆಂಟಲ್ ರಿಸರ್ಚ್ ಲೈಬ್ರರಿಯ ಗ್ರಂಥಪಾಲಕ ಹಾಗೂ ಸಂಸ್ಕೃತ ವಿದ್ವಾಂಸ ರುದ್ರಪಟ್ಟಣ ಶಾಮಶಾಸ್ತ್ರಿ ಅವರಿಗೆ ನೀಡಿದರು. ಅಂದಿನಿಂದ ಇಂದಿನವರೆಗೆ ಬೆಲೆಕಟ್ಟಲಾಗದ ಈ ಅಮೂಲ್ಯ ಗ್ರಂಥ ಮೈಸೂರಿನಲ್ಲಿದೆ. ಇದು ಮೈಸೂರಿಗೆ ಹಾಗೂ ರಾಜ್ಯಕ್ಕೆ ಹಿರಿಮೆಯಾಗಿದೆ. ಕೌಟಿಲ್ಯನ ಅರ್ಥಶಾಸ್ತ್ರ ಗ್ರಂಥ ಪಡೆದ ಶಾಮಶಾಸ್ತ್ರಿ ಅವರು ಅದನ್ನು ಹೊಸ ತಾಳೆಗರಿಗಳ ಮೇಲೆ ಲಿಪ್ಯಂತರ ಮಾಡಿ 1909ರಲ್ಲಿ ಪ್ರಕಟಿಸಿದರು. ನಂತರ 1915ರಲ್ಲಿ ಇಂಗ್ಲಿಷ್​ಗೆ ಅನುವಾದಿಸಿದರು.

ಶಾಮಶಾಸ್ತ್ರಿ ಅವರ ಪರಿಶ್ರಮದ ಫಲವಾಗಿ ಕೌಟಿಲ್ಯನ ಅರ್ಥಶಾಸ್ತ್ರ ದೇಶ, ವಿದೇಶಗಳಿಗೆ ತಲುಪಿ ದೇಶದ ಹಿರಿಮೆಯೂ ಹೆಚ್ಚಾಯಿತು. ಆಗಿನ ಮೈಸೂರಿನ ಮಹಾರಾಜರು ಜರ್ಮನಿಗೆ ಪ್ರಯಾಣ ಬೆಳೆಸಿದಾಗ ಜರ್ಮನಿಯ ರಾಜರನ್ನು ಭೇಟಿಯಾಗಿ ‘ಮೈಸೂರಿನ ಮಹಾರಾಜ’ ಎಂದು ಪರಿಚಯಿಸಿಕೊಂಡಾಗ ‘ನೀವು ಶಾಮಶಾಸ್ತ್ರಿಗಳ ನಾಡಿನಿಂದ ಬಂದಿದ್ದೀರಾ’ ಎಂದು ಕೇಳಿದ್ದರಂತೆ. ಕೌಟಿಲ್ಯನ ಅರ್ಥಶಾಸ್ತ್ರ ಹಾಗೂ ಶಾಮಶಾಸ್ತ್ರಿ ಹೆಸರು ವಿಶ್ವವಿಖ್ಯಾತಿ ಹೊಂದಿದೆ ಎಂಬುದಕ್ಕೆ ಇದು ನಿದರ್ಶನ.

ಮಾಹಿತಿಯ ಕಣಜ

ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ರಾಜಕುಮಾರನನ್ನು ಹೇಗೆ ಬೆಳೆಸಬೇಕು, ಅವರ ವಿದ್ಯಾಭ್ಯಾಸ ಹೇಗಾಗಬೇಕು, ರಾಯಭಾರಿಗಳ ಆಯ್ಕೆಯನ್ನು ಯಾವ ರೀತಿ ಮಾಡಬೇಕು, ಗೂಢಾಚಾರರನ್ನು ಹೇಗೆ ಉಪಯೋಗಿಸಿಕೊಳ್ಳಬೇಕು, ರಾಜನಿಗೆ ಅಪಾಯ ಒದಗದ ಹಾಗೆ ರಕ್ಷಣೆ ಯಾವ ರೀತಿ ನೀಡಬೇಕು, ಕಾನೂನು ಹಾಗೂ ರಕ್ಷಣಾ ಕಾರ್ಯ, ಶ್ರೀಮಂತರಿಗೆ ದಾನ ಮಾಡುವಂತೆ ಹೇಗೆ ಪ್ರೇರೇಪಿಸಬೇಕು, ಯುದ್ಧವನ್ನು ಯಾವ ರೀತಿ ತಪ್ಪಿಸಬೇಕು ಎಂಬುದು ಸೇರಿದಂತೆ ಹಲವಾರು ವಿಷಯಗಳ ಕುರಿತು ಬೆಳಕು ಚೆಲ್ಲಲಾಗಿದೆ.

ಮೋದಿಯಿಂದ ವೀಕ್ಷಣೆ...

ದೇಶದ ಶ್ರೀಮಂತ ಹಸ್ತಪ್ರತಿ ಪರಂಪರೆ ಕುರಿತು ನವದೆಹಲಿಯಲ್ಲಿ ಇತ್ತೀಚೆಗೆ ‘ಜ್ಞಾನ ಭಾರತಂ’ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಸಮ್ಮೇಳನದಲ್ಲಿ ಭಾಗವಹಿಸಿ ಮೈಸೂರಿನ ಓರಿಯೆಂಟಲ್ ರಿಸರ್ಚ್ ಇನ್​ಸ್ಟಿಟ್ಯೂಟ್ ಪ್ರದರ್ಶಿಸಿದ ಕೌಟಿಲ್ಯನ ಅರ್ಥಶಾಸ್ತ್ರದ ಹಸ್ತಪ್ರತಿಯನ್ನು ಕುತೂಹಲದಿಂದ ವೀಕ್ಷಿಸಿದ್ದರು. 1891ರಲ್ಲಿ ಮೈಸೂರು ರಾಜರಿಂದ ಸ್ಥಾಪಿಸಲ್ಪಟ್ಟ ಓರಿಯೆಂಟಲ್ ರಿಸರ್ಚ್ ಲೈಬ್ರರಿ, ನಂತರ ಸರ್ಕಾರದ ನೆರವಿನಿಂದ ಓರಿಯೆಂಟಲ್ ರಿಸರ್ಚ್ ಇನ್​ಸ್ಟಿಟ್ಯೂಟ್ ಆಗಿ ಬದಲಾಯಿತು. ಈ ಸಂಸ್ಥೆ 70,000ಕ್ಕೂ ಹೆಚ್ಚು ಅಪೂರ್ವ ಹಸ್ತಪ್ರತಿಗಳ ಸಂಗ್ರಹವನ್ನು ಹೊಂದಿದೆ.