ಹೇಮನಾಥ್ ಪಡುಬಿದ್ರಿ
ಕಾಪು ತಾಲೂಕು ಆಡಳಿತ ಈ ಬಾರಿ ಮುಂಗಾರು ಎದುರಿಸಲು ಎಲ್ಲ ರೀತಿಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದ್ದು, ಹಿಂದಿನ ವರ್ಷ ಘಟಿಸಿದ್ದ ಸಮಸ್ಯೆಗಳು ಮರುಕಳಿಸದಂತೆ ಯೋಜನೆ ರೂಪಿಸಿದೆ.
ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ ಪ್ರದೇಶದಿಂದ ಹೆಜಮಾಡಿ, ಕಟಪಾಡಿ ತನಕ ಐದಾರು ಕಡೆ ಕೃತಕ ನೆರೆಯುಂಟಾಗುವ ಪ್ರದೇಶಗಳನ್ನು ಗುರುತಿಸಲಾಗಿದೆ. ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಕೂಡ ಈಗಾಗಲೇ ಐದು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ಶೀಘ್ರವೇ ಸಮಸ್ಯೆ ಬಗೆಹರಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚಿಸಿದ್ದಾರೆ.
ಕಾಪು ಪುರಸಭೆ ವ್ಯಾಪ್ತಿಯಲ್ಲಿರುವ ತೋಡುಗಳ ಸ್ವಚ್ಛಗೊಳಿಸುವಿಕೆ, ಹೂಳೆತ್ತುವಿಕೆಗೆ ಈಗಾಗಲೇ ಚಾಲನೆ ನೀಡಲಾಗಿದ್ದು, ವಿದ್ಯುತ್ ತಂತಿಗಳಿಗೆ ಹಬ್ಬಿರುವ ಕೊಂಬೆಗಳು, ಬಳ್ಳಿಗಳನ್ನು ಮೆಸ್ಕಾಂ ತೆರವುಗೊಳಿಸುತ್ತಿದೆ.
ಕಡಲ್ಕೊರೆತ ಪರಿಹಾರ ಮರೀಚಿಕೆ: ಮಳೆಗಾಲ ಸಂದರ್ಭ ತಾಲೂಕಿನ ಸಮುದ್ರ ತೀರದಲ್ಲಿ ಕಡಲ್ಕೊರೆತ ಸಾಮಾನ್ಯವಾಗಿದ್ದು, ಇಲ್ಲಿಗೆ ಶಾಶತ್ವ ಪರಿಹಾರವೆಂಬುದು ಮರೀಚಿಕೆಯಾಗಿ ಉಳಿದಿದೆ. ಪ್ರತಿ ವರ್ಷವೂ ಕಡಲ್ಕೊರೆತವಾದಾಗ ಅಧಿಕಾರಿಗಳು, ಜನಪ್ರತಿನಿಧಿಗಳು ಭರವಸೆಗಷ್ಟೇ ಸೀಮಿತರಾಗುತ್ತಿದ್ದಾರೆ.
ಜಲಜೀವನ್ ಮಿಷನ್ ಯೋಜನೆ ಪೈಪ್‌ಲೈನ್ ಹಾಗೂ ಗ್ಯಾಸ್ ಪೈಪ್‌ಲೈನ್ ಅಳವಡಿಕೆ, ಕಾಪು ಸಹಿತ ಹಲವು ಗ್ರಾಮಗಳಿಗೆ ಕುರ್ಕಾಲು ಹೊಳೆಯಿಂದ ನೀರು ಶುದ್ಧೀಕರಿಸಿ ವಿತರಿಸುವ ಯೋಜನೆ ಕಾಮಗಾರಿ ಇನ್ನೂ ಮುಂದುವರೆದಿವೆ. ರಸ್ತೆಗಳಲ್ಲಿರುವ ಹೊಂಡಗಳನ್ನು ಮುಚ್ಚಬೇಕಿದ್ದು, ಕೆಲವು ಗ್ರಾ.ಪಂ. ವ್ಯಾಪ್ತಿಯ ರಸ್ತೆಗಳಲ್ಲಿ ತ್ಯಾಜ್ಯಗಳು ತುಂಬಿದ್ದು ಇದು ಕೃತಕ ನೆರೆಗೆ ಕಾರಣವಾಗುತ್ತಿದೆ.
ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಕೃತಕ ನೆರೆ ಉಂಟಾಗದಂತೆ ಚರಂಡಿ ಹಾಗೂ ಮಳೆ ನೀರು ಹರಿಯುವ ತೋಡುಗಳ ಹೂಳೆತ್ತಿ ಸ್ವಚ್ಛಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ. ಕಡಲ್ಕೊರೆತ ಸಮಸ್ಯೆಗೆ ಕೂಡಲೇ ಸ್ಪಂದಿಸುವಂತೆ, ಅಪಾಯಕಾರಿ ಮರಗಳ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಶಾಸಕರ ನೇತೃತ್ವದಲ್ಲಿ ಶೀಘ್ರವೇ ಕಾರ್ಯಪಡೆಯ ಸಭೆ ಆಯೋಜಿಸಿ ಎಲ್ಲ ಇಲಾಖೆಗಳಿಗೆ ಸೂಕ್ತ ನಿರ್ದೇಶನ ನೀಡಲಾಗುವುದು. ನೆರೆಯಿಂದ ತೊಂದರೆಗೊಳಗಾದವರಿಗೆ ತಾಲೂಕು ಆಡಳಿತದಿಂದ ಬೋಟ್ ಹಾಗೂ ಈಜುಗಾರರ ಸಹಿತ ರಕ್ಷಣೆ ನೀಡಲಾಗುವುದು. -ಪ್ರತಿಭಾ ಆರ್., ತಹಸೀಲ್ದಾರರು, ಕಾಪು ತಾಲೂಕು ಕಾಪು ಪುರಸಭೆ ವ್ಯಾಪ್ತಿಯಲ್ಲಿ ಮಳೆ ನೀರು ಹರಿಯುವ 89 ಕಿಲೋಮೀಟರ್ ಪ್ರದೇಶದಲ್ಲಿ ಸಣ್ಣ ಹಾಗೂ ದೊಡ್ಡ ತೋಡುಗಳಿವೆ. ಮಳೆಗಾಲದಲ್ಲಿ ಕೃತಕ ನೆರೆ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ತಿಂಗಳ ಮೊದಲೇ ಈ ತೋಡುಗಳ ಹೂಳೆತ್ತಿ, ಸ್ವಚ್ಛತೆ ನಡೆಸುವ ಕಾರ್ಯವನ್ನು ಆರಂಭಿಸಲಾಗಿದ್ದು, ಶೇ.75 ಕಾಮಗಾರಿ ಪೂರ್ಣಗೊಂಡಿದೆ. ತೋಡುಗಳ ನೀರು ಸರಾಗವಾಗಿ ಹರಿಯಲು ಕ್ರಮ ವಹಿಸಲಾಗುತ್ತಿದೆ. -ನಾಗರಾಜ ಸಿ. ಮುಖ್ಯಾಧಿಕಾರಿ, ಕಾಪು ಪುರಸಭೆ
*ಹಿಂದಿನ ವರ್ಷದ ಸಮಸ್ಯೆಗಳು ಮರುಕಳಿಸದಂತೆ ಎಚ್ಚರಿಕೆ *ತುರ್ತು ಪರಿಸ್ಥಿತಿಗೆ ಸಿದ್ಧರಿರಲು ಇಲಾಖೆಗಳಿಗೆ ಸೂಚನೆ *ಶಾಸಕರ ನೇತೃತ್ವದಲ್ಲಿ ಶೀಘ್ರವೇ ಕಾರ್ಯಪಡೆ ಸಭೆ