ಜಿಲ್ಲೆ

ಗಡಿ ಗುರುತು, ಜಂಟಿ ಸರ್ವೇ ಶೀಘ್ರ ನಡೆಯಲಿ : ಕಿಶೋರ್ ಶಿರಾಡಿ ಒತ್ತಾಯ

ಸುಬ್ರಹ್ಮಣ್ಯ: ಕಸ್ತೂರಿರಂಗನ್ ವರದಿಯ ದಕ್ಷಿಣ ಕನ್ನಡ ಜಿಲ್ಲೆಯ ಬಾಧಿತ ಗ್ರಾಮಗಳ ಗಡಿ ಗುರುತು ಹಾಗೂ ಜಂಟಿ ಸರ್ವೇಯನ್ನು ಕಂದಾಯ ಹಾಗೂ ಅರಣ್ಯ ಇಲಾಖೆಗಳು ಒಟ್ಟಾಗಿ ಮಾಡಿ ರೈತರ ಗೊಂದಲ ಪರಿಹರಿಸಿ ಗಡಿ ಗುರುತು ಮಾಡಿಕೊಡಬೇಕು ಎಂದು ಜನಹಿತ ಮಲೆನಾಡು ಜನ ಹಿತ ರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ ಒತ್ತಾಯಿಸಿದರು.

ಬುಧವಾರ ಸುಬ್ರಹ್ಮಣ್ಯದಲ್ಲಿ ಬಾಧಿತ ಗ್ರಾಮಗಳ ರೈತರನ್ನು ಉದ್ದೇಶಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಪುತ್ತೂರು ಕಂದಾಯ ಉಪವಿಭಾಗ ಕಚೇರಿಯ ಮುಂಭಾಗದಲ್ಲಿ ಎಲ್ಲ ರೈತರು ಸೇರಿ ಉಪವಿಭಾಗ ಅಧಿಕಾರಿ ಅವರಿಂದ ಜಂಟಿ ಸರ್ವೇ ಹಾಗೂ ಗಡಿ ಗುರುತು ಬಗ್ಗೆ ವಿವರಣೆ ಹಾಗೂ ಮಾಹಿತಿ ಪಡೆದುಕೊಳ್ಳಲಿದ್ದಾರೆ. ಶೀಘ್ರವಾಗಿ ಅರಣ್ಯ ಹಾಗೂ ಕಂದಾಯ ಇಲಾಖೆಯವರು ಜಂಟಿ ಸರ್ವೇ ಮಾಡಿ ನೊಂದ ರೈತರಿಗೆ ಹಕ್ಕುಪತ್ರ ಹಾಗೂ ಆರ್‌ಟಿಸಿ ದೊರಕುವಂತೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಪಶ್ಚಿಮ ಘಟ್ಟ ಭಾಗದ ಕಡಬ, ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕುಗಳ ಭಾಗದ ರೈತರು ಕಳೆದ 15 ವರ್ಷಗಳಿಂದ ನಿರಂತರವಾಗಿ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ಕಳೆದ ನವೆಂಬರ್‌ನಲ್ಲಿ ರಾಜಕೀಯ ಪಕ್ಷಗಳು, ಧಾರ್ಮಿಕ ಮುಖಂಡರು, ರೈತಾಪಿ ವರ್ಗ ಸೇರಿ ಬೃಹತ್ ಪ್ರಮಾಣದ ಜನಾಂದೋಲನ ಸಭೆ ಗುಂಡ್ಯದಲ್ಲಿ ಆಯೋಜಿಸಲಾಗಿತ್ತು. ಅದರ ಫಲವಾಗಿ ಶಿವಮೊಗ್ಗ ಅರಣ್ಯ ಇಲಾಖೆಯ ಕಾರ್ಯ ಯೋಜನೆ ಮತ್ತು ನೋಂದಣಿ ಘಟಕದ ವತಿಯಿಂದ ಜಂಟಿ ಸರ್ವೇಗೆ ಆದೇಶ ಬಂದಿದೆ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸೈಯದ್ ಮೀರಾ ಸಾಹೇಬ್ ಕಡಬ, ಅಶೋಕ್ ಕುಮಾರ್ ಮೂಲೆಮಜಲು ಮುಂತಾದವರು ಉಪಸ್ಥಿತರಿದ್ದರು.