ಜಿಲ್ಲೆ

ರಂಗು ಕಳೆದುಕೊಂಡ ಕಾರವಾರ ರಂಗಮಂದಿರ

Uttara Kannada - Subash Hegde

ಕಾರವಾರ: ನಗರದ ವಿವಿಧ ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮಗಳ ಕೇಂದ್ರವಾಗಿದ್ದ ಜಿಲ್ಲಾ ರಂಗಮಂದಿರದ ಮೇಲ್ಛಾವಣಿ ಸೋರುತ್ತಿದ್ದು, ಅಲ್ಲಿ ಕಾರ್ಯಕ್ರಮ ಮಾಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
ಜಿಲ್ಲಾ ಮಟ್ಟದ ಎಲ್ಲ ಸರ್ಕಾರಿ ಕಾರ್ಯಕ್ರಮಗಳು ಮಾಲಾದೇವಿ ಮೈದಾನದಲ್ಲಿರುವ ಜಿಲ್ಲಾ ರಂಗಮಂದಿರದಲ್ಲಿ ಆಯೋಜನೆಯಾಗುತ್ತಿದ್ದವು. ಸ್ವಾತಂತ್ರ್ಯೋತ್ಸವ ಗಣರಾಜ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ತರಬೇತಿಗಳು ನಡೆಯುತ್ತಿದ್ದವು.

ಅಲ್ಲದೆ, ಖಾಸಗಿ, ಅರೆ ಸರ್ಕಾರಿ ಸಂಘ, ಸಂಸ್ಥೆಗಳು, ಕಾಲೇಜ್‌ಗಳಿಗೂ ಈ ರಂಗಮಂದಿರ ಬಾಡಿಗೆ ನೀಡಲಾಗುತ್ತಿತ್ತು. ವಾರಕ್ಕೆ ಕನಿಷ್ಠ 1 ದಿನವಾದರೂ ಕಾರ್ಯಕ್ರಮ ಇರುತ್ತಿತ್ತು.

ಕೆಲವು ಬಾರಿ ರಂಗ ಮಂದಿರ ಬೇಕಾದ ದಿನಾಂಕಕ್ಕೆ ಖಾಲಿ ಸಿಗುವುದು ಕಷ್ಟವಾಗಿತ್ತು. ನಗರದ ಮಧ್ಯದಲ್ಲೇ ಇರುವುದರಿಂದ ಹೊರ ಊರುಗಳಿಂದ ಬರುವವರಿಗೂ ಅನುಕೂಲವಾಗುತ್ತಿತ್ತು.

ಈಗ ರಂಗ ಮಂದಿರದಲ್ಲಿ ಕಾರ್ಯಕ್ರಮ ನಡೆಸುವುದನ್ನು ಬಂದ್ ಮಾಡಿದ್ದರಿಂದ ಸರ್ಕಾರಿ ಕಾರ್ಯಕ್ರಮಗಳನ್ನು ಕಾಜುಬಾಗದ ಪೊಲೀಸ್ ಕಲ್ಯಾಣ ಮಂಟಪಕ್ಕೆ ಸ್ಥಳಾಂತರಿಸಲಾಗಿದೆ.
ಹಳೆಯ ಕಟ್ಟಡ:
750 ಆಸನಗಳಿರುವ ಜಿಲ್ಲಾ ರಂಗಮಂದಿರವನ್ನು 1986 ರಲ್ಲಿ ನಿರ್ಮಾಣ ಮಾಡಲಾಗಿತ್ತು. 2011-12 ರಲ್ಲಿ ಸುಮಾರು 1 ಕೋಟಿ ವೆಚ್ಚದಲ್ಲಿ ನವೀಕರಣ ಮಾಡಲಾಗಿತ್ತು.

ಹೊಸ ಖುರ್ಚಿಗಳು, ಎಸಿ ಹಾಗೂ ಫಾಲ್ ಸೀಲಿಂಗ್ ವ್ಯವಸ್ಥೆ ಮಾಡಲಾಗಿತ್ತು. ಈಗ ರಂಗ ಮಂದಿರದ ಮೇಲ್ಛಾವಣಿಯಲ್ಲಿ ಸೋರುತ್ತಿದ್ದು, ಫಾಲ್ ಸೀಲಿಂಗ್ ಕಿತ್ತು ಬೀಳಲಾರಂಭಿಸಿದೆ.

ಲೈಟಿಂಗ್ ವ್ಯವಸ್ಥೆ ಹಾಳಾಗಿದೆ. ಮೈಕ್‌ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಕಂಬ, ಸ್ಲ್ಯಾಬ್ ಕಿತ್ತು ಬರುತ್ತಿವೆ. ಶಟರ್‌ಗಳು ತುಕ್ಕು ಹಿಡಿದು, ಈಗಲೋ, ಆಗಲೋ ಬೀಳುವಂತಿವೆ. ಶೌಚಗೃಹಗಳು ಬಳಕೆಗೆ ಬಾರದಂತಾಗಿದೆ.

ತುರ್ತು ರಿಪೇರಿ ಮಾಡಲು ದೊಡ್ಡ ಕಟ್ಟಡವನ್ನು ಹತ್ತುವ ಕಾರ್ಮಿಕರು ಸಿಗುತ್ತಿಲ್ಲ ಎಂಬುದು ರಂಗ ಮಂದಿರದ ನಿರ್ವಹಣೆ ಮಾಡುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳ ಅಭಿಪ್ರಾಯ.

ನಾಲ್ಕು ವರ್ಷದಿಂದ ಆಗದ ಸಭೆ:
ಜಿಲ್ಲಾ ರಂಗ ಮಂದಿರ ನೋಡಿಕೊಳ್ಳಲು ಉಸ್ತುವಾರಿ ಸಮಿತಿ ಇದೆ. ಜಿಲ್ಲಾಽಕಾರಿ ಅದಕ್ಕೆ ಅಧ್ಯಕ್ಷರು. ಜಿಪಂ ಸಿಇಒ, ಎಸ್‌ಪಿ, ಪಿಡಬ್ಲುಡಿ ಇಂಜಿನಿಯರ್‌ಗಳು ಅದಕ್ಕೆ ಸದಸ್ಯರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಅದಕ್ಕೆ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.

2019 ರ ನಂತರ ಜಿಲ್ಲಾ ರಂಗಮಂದಿರ ಸಮಿತಿಯ ಸಭೆಯೇ ಆಗಿಲ್ಲ. ರಂಗಮಂದಿರದ ಬಾಡಿಗೆ ಹಣ 17 ಲಕ್ಷ ರೂ. ಇದೆ. ಆದರೆ, ಅದನ್ನು ಖರ್ಚು ಮಾಡಲೂ ಸಭೆಯಾಗುತ್ತಿಲ್ಲ.

ರಂಗ ಮಂದಿರ ನಿರ್ವಹಣೆ ಮಾಡುವ ಕನ್ನಡ ಸಂಸ್ಕೃತಿ ಇಲಾಖೆಗೆ ಕಾಯಂ ಸಹಾಯಕ ನಿರ್ದೇಶಕರಿಲ್ಲ. ಜನಪ್ರತಿನಿಧಿಗಳೂ, ಹಿರಿಯ ಅಧಿಕಾರಿಗಳೂ ಈ ಕಟ್ಟಡದ ಬಗ್ಗೆ ಗಮನ ಹರಿಸುತ್ತಿಲ್ಲ.

ಜಿಲ್ಲಾ ರಂಗಮಂದಿರದ ಖಾತೆಯಲ್ಲಿ 17 ಲಕ್ಷ ರೂ. ಹಣವಿದೆ. ಮೇಲ್ಛಾವಣಿ ಹತ್ತಲು ಸ್ಥಳೀಯವಾಗಿ ಕಾರ್ಮಿಕರು ಸಿಗುತ್ತಿಲ್ಲ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ವರದಿ ನೀಡಿದ್ದಾರೆ. ಶೀಘ್ರದಲ್ಲಿ ತಾತ್ಕಾಲಿಕ ರಿಪೇರಿ ಕಾರ್ಯ ಕೈಗೊಂಡು ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗುವುದು.ಕೆ.ರಾಮಚಂದ್ರಕನ್ನಡ, ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ