ಜಿಲ್ಲೆ

ಕಾರವಾರ ವಾಣಿಜ್ಯ ಬಂದರು ಖಾಸಗಿ ತೆಕ್ಕೆಗೆ ..?

Uttara Kannada - Subash Hegde

ಕಾರವಾರ: ಇಲ್ಲಿನ ವಾಣಿಜ್ಯ ಬಂದರಿನ ಅಭಿವೃದ್ಧಿ ಹಾಗೂ ನಿರ್ವಹಣೆಯನ್ನು ಖಾಸಗಿಗೆ ವಹಿಸಲು ಯೋಜಿಸಲಾಗುತ್ತಿದ್ದು, ಈ ಸಂಬಂಧ ಈಗಾಗಲೇ ವಹಿವಾಟು ಸಲಹಾ ಸೇವೆಗೆ (ಆರ್‌ಎಫ್‌ಪಿ) ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಬಂದರಿನ ಜಟ್ಟಿಯ ಕಾರ್ಯನಿರ್ವಹಣೆಯನ್ನು ಪುನರ್ವಸತಿ, ನಿರ್ವಹಣೆ ಹಾಗೂ ಹಸ್ತಾಂತರ(ಆರ್‌ಒಎಂಟಿ) ಮಾದರಿಯಲ್ಲಿ ಖಾಸಗಿ, ಸಾರ್ವಜನಿಕ ಸಹಭಾಗಿತ್ವ ಕ್ಕೆ (ಪಿಪಿಪಿ)ವಹಿಸಲು ಪ್ರಾಥಮಿಕ ಯೋಜನೆ ರೂಪುಗೊಂಡಿದ್ದು, ಅದಕ್ಕೆ ಬೇಕಾದ ಆಡಳಿತಾತ್ಮಕ ಅನುಮೋದನೆ, ಯೋಜನೆ, ಟೆಂಡರ್ ಪ್ರಕ್ರಿಯೆ ಮುಂತಾದವನ್ನು ನಡೆಸಲು ಟೆಂಡರ್ ಆಹ್ವಾನಿಸಲಾಗಿದೆ ಎಂದು ಕರ್ನಾಟಕ ಜಲಸಾರಿಗೆ ಮಂಡಳಿ (ಕೆಎಂಬಿ)ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈಗಾಗಲೇ ಮಂಗಳೂರಿನ ಬಂದರಿನಲ್ಲಿ ಐಒಸಿಎಲ್ ಮುಂತಾದ ಕಂಪನಿಗಳು ಜಟ್ಟಿ ಹೊಂದಿವೆ. ಗೋವಾದಲ್ಲಿ ಜಿಂದಾಲ್ ಕಂಪನಿ ಜಟ್ಟಿಯೊಂದನ್ನು ಲೀಸ್‌ಗೆ ಪಡೆದು ಅಭಿವೃದ್ಧಿಪಡಿಸಿ, ನಡೆಸುತ್ತಿದೆ. ಅಂಕೋಲಾ ಕೇಣಿಯಲ್ಲಿ ಬಂದರು ಅಭಿವೃದ್ಧಿಗೆ ಈಗಾಗಲೇ ಜೆಎಸ್‌ಡಬ್ಲು ಒಪ್ಪಂದ ಮಾಡಿಕೊಂಡಿದೆ. ಅದೇ ರೀತಿ ಈಗ ಕಾರವಾರ, ಮಲ್ಪೆ, ಮಂಗೂರಿನ 2 ಸೇರಿ ಒಟ್ಟು ನಾಲ್ಕು ಜಟ್ಟಿಗಳನ್ನು ಆರ್‌ಒಎಂಟಿ ಮಾದರಿಯಲ್ಲಿ ಖಾಸಗಿ ಸಹಭಾಗಿತ್ವಕ್ಕೆ ವಹಿಸಬಹುದು ಎಂದು ಯೋಜಿಸಲು ಜ.16 ರಂದು ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಮೆರಿಟೈಮ್ ಬೋರ್ಡ್ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂಬ ಮಾಹಿತಿ ಇದೆ.
ಆದಾಯ ಹೆಚ್ಚಳಕ್ಕೆ ಯೋಜನೆ:
ಕಾರವಾರ ಬಂದರಿನಲ್ಲಿ ಸದ್ಯ ಡೀಸೆಲ್(ಎಚ್‌ಎಸ್‌ಡಿ), ರಾಕ್ ಫಾಸ್ಪೇಟ್, ಇಂಡಸ್ಟಿçಯಲ್ ಸಾಲ್ಟ್ ಹಾಗೂ ಬಿಟುಮಿನ್(ಡಾಂಬರು)ಗಳ ಆಮದಾಗುತ್ತದೆ. ವಾರ್ಷಿಕವಾಗಿ ಸರಾಸರಿ 10 ರಿಂದ 12 ಲಕ್ಷ ಮೆಟ್ರಿಕ್ ಟನ್ ಸಹಕಿನ ವಹಿವಾಟು ನಡೆಸುತ್ತಿದೆ. 2019-20 ರಲ್ಲಿ ಬಂದರು 16.74 ಕೋಟಿ, 2021-22 ನೇ ಸಾಲಿನಲ್ಲಿ 16.96 ಕೋಟಿ ರೂ. ಆದಾಯ ಗಳಿಸಿತ್ತು. 2022-23 ನೇ ಸಾಲಿನಲ್ಲಿ 21 ಕೋಟಿ ರೂ. ದಾಖಲೆ ಆದಾಯ ಗಳಿಸಿತ್ತು. ಆದರೆ, ಇತರ ಕೆಲವು ಸರ್ವಋತು ಬಂದರುಗಳಿಗೆ ಹೋಲಿಸಿದರೆ ಆದಾಯ ಕಡಿಮೆ ಎನಿಸುತ್ತದೆ. ಸರ್ಕಾರದ ನಿಯಮಾವಳಿಯ ಅಡಿಯೇ ಕಾರ್ಯನಿರ್ವಹಿಸಬೇಕಿರುವುದರಿಂದ ಹೂಳೆತ್ತುವ ಕಾರ್ಯ, ಬಾರ್ಜ್‌ಗಳ ನಿರ್ವಹಣೆ ಮುಂತಾದ ಕಾರ್ಯಗಳು ಕೆಲವು ಬಾರಿ ವಿಳಂಬವಾಗುತ್ತವೆ. ಇಂಥ ಅಂಶಗಳು ಆದಾಯ ಇಳಿಕೆಗೆ ಕಾರಣವಾಗುತ್ತವೆ. ಇದರಿಂದ ಖಾಸಗಿಯವರು ಸರ್ಕಾರಕ್ಕೆ ಇದಕ್ಕಿಂತ ಹೆಚ್ಚು ಆದಾಯ ನೀಡಿದಲ್ಲಿ ಜಟ್ಟಿಯನ್ನು ಅವರಿಗೆ ಲೀಸ್‌ಗೆ ನೀಡುವ ಯೋಜನೆ ಇದಾಗಿದೆ. ಯೋಜನೆ ಇನ್ನೂ ಪ್ರಾರಂಭಿಕ ಹಂತದಲ್ಲಿದೆ. ಸರ್ಕಾರ ಅನುಮತಿ ನೀಡಿದಲ್ಲಿ ಯೋಜನೆ ಜಾರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಬಂದರುಗಳಿಗೆ ರಸ್ತೆ, ರೈಲು ಸಂಪರ್ಕ ಕಲ್ಪಿಸಲು ಮಾಸ್ಟರ್‌ ಪ್ಲಾನ್‌

ಆದಾಯ ಇಳಿಕೆ ಆತಂಕ
ಕಾರವಾರ ಬಂದರಿನಲ್ಲಿ ವರ್ಷಕ್ಕೆ ಸುಮಾರು 120 ರಿಂದ 150 ಹಡಗುಗಳು ಬಂದು ಸರಕು ವಹಿವಾಟು ನಡೆಸುತ್ತವೆ. ಸರಾಸರಿ 10 ರಿಂದ 20 ಕೋಟಿ ರೂ. ನೇರ ಆದಾಯ ಸರ್ಕಾರಕ್ಕೆ ಬರುತ್ತವೆ. ಆದರೆ ಈ ಬಾರಿ ಆದಾಯ ಇಳಿಕೆ ಆತಂಕ ಕಾಡಿದೆ. ಕಳೆದ 9 ತಿಂಗಳಲ್ಲಿ 6.50 ಲಕ್ಷ ಮೆಟ್ರಿಕ್ ಟನ್ ಸರಕು ನಿರ್ವಹಿಸಿ ಕೇವ 13.05 ಕೋಟಿ ರೂ. ಆದಾಯ ಗಳಿಸಲಾಗಿದೆ. ಬಿಟುಮಿನ್ ಅಥವಾ ಡಾಂಬರು ಕಾರವಾರ ಬಂದರಿನ ಪ್ರಮುಖ ಆದಾಯದ ಮೂಲವಾಗಿದೆ. ಈ ಡಾಂಬರನ್ನು ರಸ್ತೆ ನಿರ್ಮಾಣಗಳಿಗೆ ಬಳಸಲಾಗುತ್ತದೆ. ಈ ಬಾರಿ ರಾಜ್ಯದಲ್ಲಿ ಡಾಂಬರು ರಸ್ತೆಗಳ ನಿರ್ಮಾಣ ಕಾಮಗಾರಿ ಅತಿ ಕಡಿಮೆಯಾಗಿದ್ದು, ಇದರಿಂದ ಸಂಗ್ರಹವಿರುವ ಡಾಂಬರನ್ನೇ ಕೊಳ್ಳುವವರಿಲ್ಲ. ಹೊಸದಾಗಿ ಡಾಂಬರು ಖರೀದಿ ಕಡಿಮೆಯಾಗಿದೆ ಎಂದು ಆಮದುದಾರರೊಬ್ಬರು ಮಾಹಿತಿ ನೀಡಿದ್ದಾರೆ.

ವಾಣಿಜ್ಯ ಬಂದರುಗಳ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ. ಬಂದರುಗಳ ಆದಾಯ ಹೆಚ್ಚಿಸಲು ಸಂಪರ್ಕ ಹಾಗೂ ಇತರ ಯೋಜನೆ ರೂಪಿಸಲಾಗುತ್ತಿದೆ. ಕಾರವಾರ ಬಂದರನ್ನು 40 ಕೋಟಿ ರೂ. ವೆಚ್ಚದಲ್ಲಿ ಹೂಳೆತ್ತಲಾಗುತ್ತಿದೆ.ಮಂಕಾಳ ವೈದ್ಯಬಂದರು ಸಚಿವ