ಹರಪನಹಳ್ಳಿ ಖಾಸಗಿ ಶಾಲೆಯಲ್ಲಿ ಕಸಾಪ ವತಿಯಿಂದ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷ ಜಿ.ನಂಜನಗೌಡ ಉದ್ಘಾಟಿಸಿದರು. ನಿವೃತ್ತ ಪೊಲೀಸ್ ಮಹದೇವಪ್ಪ, ಪ್ರಾಚಾರ್ಯ ನಂಜಪ್ಪ, ಕನ್ನಡ ಶಿಕ್ಷಕ ಟಿ.ಎಂ.ಬಸವರಾಜ್, ಪ್ರಮುಖರಾದ ಕುಸುಮಾ ಜಗದೀಶ್, ಸಿದ್ದಪ್ಪ, ಡಾ.ಮಂಜುನಾಥ ಬೆನಕೊಂಡ, ಮುತೇಶ್, ಎಲ್.ರಾಜಪ್ಪ, ಕುಮಾರಸ್ವಾಮಿ ಇತರರಿದ್ದರು. 
ಜಿಲ್ಲೆ

ಕರ್ನಾಟಕ ಎಲ್ಲ ಭಾಷೆಗಳ ತವರೂರು

ಹರಪನಹಳ್ಳಿ: ಎಲ್ಲ ಭಾಷೆಗಳ ತವರೂರು ಕರ್ನಾಟಕ. ಯಾವುದೇ ಭಾಷಿಕರು ರಾಜ್ಯದಲ್ಲಿ ಮುಕ್ತವಾಗಿ ಜೀವನ ಕಟ್ಟಿಕೊಳ್ಳಬಹುದು ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷ ಜಿ.ನಂಜನಗೌಡ ಹೇಳಿದರು.

ಪಟ್ಟಣದ ಖಾಸಗಿ ಶಾಲೆಯಲ್ಲಿ ಕಸಾಪ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಯಾವುದೇ ದೇಶದಲ್ಲಿ ಜೀವಿಸಲು ಸ್ಥಳೀಯ ಭಾಷೆಯ ಬಗ್ಗೆ ಕನಿಷ್ಠ ಜ್ಞಾನವಿರಬೇಕು. ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಇಂಗ್ಲಿಷ್ ಭಾಷೆಯನ್ನು ವ್ಯವಾಹಾರಿಕವಾಗಿ ಬಳಕೆ ಮಾಡುತ್ತಿದ್ದಾರೆ. ಆದ್ದರಿಂದ ಇಂಗ್ಲೀಷ್ ಜಗತ್ತಿನ ಅತಿ ದೊಡ್ಡ ಭಾಷೆಯಾಗಿದೆ. ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಿ ಮರಳಿ ಬಂದಾಗ ಮಾತೃಭಾಷೆಯನ್ನು ಮರೆಯಬಾರದು. ಇಂದು ನಮ್ಮ ರಾಜ್ಯವನ್ನು ಬಹುತೇಕ ಹೊರರಾಜ್ಯದವರು ಆಕ್ರಮಿಸಿದ್ದಾರೆ. ಕನ್ನಡದ ಉಳಿವಿಗಾಗಿ ಹೋರಾಟ ಮಾಡುತ್ತಿರುವುದು ದುರಂತ ಎಂದರು.

ಕಸಾಪ ತಾಲೂಕು ಅಧ್ಯಕ್ಷ ಕೆ.ಉಚ್ಚೆಂಗೆಪ್ಪ ಮಾತನಾಡಿ, ಪರಿಷತ್ತು ಸಾಹಿತ್ಯ ಸಮ್ಮೇಳನಗಳ ಮೂಲಕ ಜನರಲ್ಲಿ ಭಾವೈಕ್ಯ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಸಮಗ್ರ ಕನ್ನಡ ನಾಡಿನ ಸಾಹಿತ್ಯೋತ್ಸವ ಎಂಬ ಮನೋಭಾವವನ್ನು ಕಳೆದ 87 ಸಮ್ಮೇಳನಗಳು ಸಮರ್ಥಿಸಿವೆ. ಸಮ್ಮೇಳನಗಳಲ್ಲಿ ಭಾಷೆ, ಸಾಹಿತ್ಯ, ಸಂಸ್ಕೃತಿಯ ಸ್ಥಿತಿಗತಿಗಳ ಕುರಿತು ನಾಡುನುಡಿಯ ಬಗ್ಗೆ ಅಭಿಮಾನ ಮೂಡಿಸಬೇಕು ಎಂದು ಹೇಳಿದರು.

ಹರಪನಹಳ್ಳಿ ಸರ್ಕಾರಿ ಬಾಲಕಿಯರ ಪ್ರೌಢಶಾಲಾ ಶಿಕ್ಷಕ ಟಿ.ಎಂ.ಬಸವರಾಜ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ಅವರ ಕಾಲಘಟ್ಟದಲ್ಲಿ ಕಸಾಪ ಸ್ಥಾಪಿಸಲಾಯಿತು. ಇಲ್ಲಿಯವರೆಗೂ ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಪಸರಿಸುವಲ್ಲಿ ಪರಿಷತ್ತು ಶ್ರಮ ವಹಿಸಿದೆ ಎಂದರು. ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಭವ್ಯ ಇತಿಹಾಸವಿದೆ. ಇಂದು ಕೇವಲ ಕನ್ನಡಿಗರಿಗೆ ಮಾತ್ರ ಸೀಮಿತವಾಗಿದೆ. ಆಂಗ್ಲರು ಜಗತ್ತಿನ ಹಲವಾರು ರಾಷ್ಟ್ರಗಳನ್ನು ತಮ್ಮ ಸುಪರ್ದಿಗೆ ಪಡೆದು ವ್ಯವಹಾರಕ್ಕಾಗಿ ಇಂಗ್ಲಿಷ್ ಭಾಷೆಯನ್ನು ಪ್ರಸಿದ್ದಿ ಮಾಡಿದ್ದಾರೆ ಎಂದರು.