ಜಿಲ್ಲೆ

ಲಸಿಕೆ ನೀಡುವಲ್ಲಿ ಕರ್ನಾಟಕಕ್ಕೆ 3ನೇ ಸ್ಥಾನ: ಆರೋಗ್ಯ ಸಚಿವ ಸುಧಾಕರ್

ಹುಬ್ಬಳ್ಳಿ: ಕೋವಿಡ್ ಲಸಿಕಾಕರಣದಲ್ಲಿ ಭಾರತ ಇತಿಹಾಸ ಬರೆದಿದೆ. ಲಸಿಕೆ ನೀಡುವಿಕೆಯಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದೆ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್​ ಹೇಳಿದ್ದಾರೆ. ಆರಂಭಿಕವಾಗಿ ಕಾಂಗ್ರೆಸ್​ನವರು ಲಸಿಕೆ ಬಗ್ಗೆ ಜನರ ದಾರಿ ತಪ್ಪಿಸಿದರು, ನಂತರ ಅವರೇ ಸರದಿಯಲ್ಲಿ ನಿಂತು ಲಸಿಕೆ ಪಡೆದರು ಎಂದು ಟೀಕಿಸಿದ್ದಾರೆ.

ಇಂದು ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಡಿ ನಡೆಸಿದ ಸುಧಾಕರ್​, ಕರ್ನಾಟಕದಲ್ಲಿ ಮಾರ್ಚ್ ತಿಂಗಳಲ್ಲಿ 25 ಸಾವಿರ ಲಸಿಕೆ ನೀಡಿದ್ದರೆ, ಸೆಪ್ಟೆಂಬರ್​​ನಲ್ಲಿ 1.48 ಲಕ್ಷ ಲಸಿಕೆ ನೀಡಲಾಯಿತು. ಸೆ. 17 ರಂದು ಒಂದೇ ದಿನ ಗರಿಷ್ಠ ಮಟ್ಟದಲ್ಲಿ ಅಂದರೆ 31 ಲಕ್ಷ 75 ಸಾವಿರ ಲಸಿಕೆ ನೀಡಲಾಯಿತು ಎಂದು ತಿಳಿಸಿದರು.

ಕರ್ನಾಟಕದಲ್ಲಿ ಇನ್ನೂ ಶೇ. 17 ರಷ್ಟು ಜನರು ಮೊದಲ ಡೋಸ್ ಲಸಿಕೆ ತೆಗೆದುಕೊಳ್ಳಬೇಕಾಗಿದ್ದು, ಶೇ. 62 ಜನರು ಎರಡನೇ ಡೋಸ್ ತೆಗೆದುಕೊಳ್ಳುವುದು ಬಾಕಿ ಇದೆ. ಹಾಲಿ ಕರ್ನಾಟಕದಲ್ಲಿ 67 ಲಕ್ಷ ಡೋಸ್​ಗಳಷ್ಟು ಲಸಿಕೆ ದಾಸ್ತಾನು ಇದೆ. ದೇಶದಲ್ಲಿ 10 ಕೋಟಿಗೂ ಹೆಚ್ಚು ಲಸಿಕೆ ದಾಸ್ತಾನು ಇದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಮುತ್ಸದ್ದಿ ಆಗಿರುವುದರಿಂದ ಕೋವಿಡ್ ಸಾಂಕ್ರಾಮಿಕ ರೋಗವನ್ನು ಉತ್ತಮವಾಗಿ ನಿಭಾಯಿಸಲು ಸಾಧ್ಯವಾಯಿತು. ಆದರೆ, ಕಾಂಗ್ರೆಸ್​​ನವರು ಲಸಿಕಾಕರಣವನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿದರು. ಇದು ಬಿಜೆಪಿ ಮತ್ತು ಮೋದಿ ಲಸಿಕೆ ಎಂದು ಹೇಳಿ ಲಸಿಕೆ ತೆಗೆದುಕೊಳ್ಳದಂತೆ ಜನರ‌ ದಾರಿ ತಪ್ಪಿಸುವ ಪ್ರಯತ್ನ ಮಾಡಿದರು.

ಕೆಲವರು ಕಾಂಗ್ರೆಸ್​​ನವರ ಮಾತು ನಂಬಿ ಪ್ರಾರಂಭದಲ್ಲಿ ಲಸಿಕೆ ಪಡೆಯಲಿಲ್ಲ. ಹೀಗಾಗಿ ಕೆಲವರು ಸೋಂಕಿನಿಂದಾಗಿ ಪ್ರಾಣ ಕಳೆದುಕೊಂಡರು. ಅವರ ಪ್ರಾಣಗಳಿಗೆ ಯಾರು ಹೊಣೆ ಎಂದು ಪ್ರಶ್ನಿಸಿದ ಸುಧಾಕರ್​, ಲಸಿಕೆ ತೆಗೆದುಕೊಳ್ಳದಂತೆ ಜನರ ದಾರಿ ತಪ್ಪಿಸಿದವರೇ ನಂತರ ಸರದಿಯಲ್ಲಿ ನಿಂತು ಲಸಿಕೆ ಪಡೆದರು ಎಂದು ಟೀಕಿಸಿದರು.