ಜಿಲ್ಲೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ; ಕೊನೆಗೂ ನನಸಾದ ಕನಸು

ಬೆಂಗಳೂರು: ಉತ್ತರ ಕನ್ನಡ ಮಂದಿಯ ಬಹುದಿನದ ಬೇಡಿಕೆಗೆ ಸರ್ಕಾರ ಮಣಿದಿದೆ. ಉತ್ತರ ಕನ್ನಡ ಭಾಗದಲ್ಲಿ ಯಾವುದೇ ಸುಸಜ್ಜಿತವಾದ ಆಸ್ಪತ್ರೆ ಇರಲಿಲ್ಲ. ಅನಾರೋಗ್ಯಕ್ಕೆ ತುತ್ತಾದರೆ ಹೊರ ಜಿಲ್ಲೆಗಳಿಗೆ ಹೋಗಬೇಕಾದ ಅನಿವಾರ್ಯತೆ ಇತ್ತು. ಹೀಗಾಗಿ ಸುಸಜ್ಜಿತವಾದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲು ಸಾರ್ವಜನಿಕರು ನಿರಂತರವಾಗಿ ಸರ್ಕಾರಕ್ಕೆ ಒತ್ತಡ ಹೇರಿದ್ದರು. ಇದೀಗ ಉತ್ತರ ಕನ್ನಡ ಭಾಗದ ಜನರ ಬೇಡಿಕೆಗೆ ಸ್ಪಂದನೆ ಸಿಕ್ಕಿದ್ದು, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ಲಭಿಸಿದೆ.

ಆರ್ಥಿಕ ಇಲಾಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ರದ್ದು ಮಾಡಿತ್ತು. ಇದಕ್ಕೆ ಜಿಲ್ಲೆಯ ಶಾಸಕರಿಂದ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಆರೋಗ್ಯ ಸಚಿವ ತಮ್ಮ ನಿವಾಸದಲ್ಲಿ ಜಿಲ್ಲೆಯ ಶಾಸಕರೊಂದಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಬೇಡಿಕೆಯ ವಿಚಾರವಾಗಿ ಮಹತ್ವದ ಸಭೆ ನಡೆಸಿದ್ದಾರೆ. ಜನರು ಹಾಗೂ ಶಾಸಕರ ಬೇಡಿಕೆಗೆ ಮಣಿದು ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ನೀಡಲು ತಾತ್ವಿಕ ಒಪ್ಪಿಗೆ ನೀಡಿದ್ದಾರೆ.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನೀಡುವ ವಿಚಾರವಾಗಿ ಶೀಘ್ರವೇ ಸಿಎಂ ಜೊತೆಗೆ ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸ ಮಾಡಲಾಗುವುದು. ಯಾವ ಭಾಗದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಬೇಕು ಎಂದು ಪರಿಶೀಲನೆ ನಡೆಸಲಾಗುವುದು. ಕಾರವಾರದ ವೈದ್ಯಕೀಯ ಕಾಲೇಜಿನ ಆವರಣದಲ್ಲಿ ಆಸ್ಪತ್ರೆ ನಿರ್ಮಾಣ್ಕಕೆ ಸ್ಥಳಾವಕಾಶವಿಲ್ಲ. ಈ ಬಗ್ಗೆ ಸಚಿವರು, ಶಾಸಕರ ಜೊತೆ ಪ್ರವಾಸ ಮಾಡಿ ಆರೋಗ್ಯ ವ್ಯವಸ್ಥೆ ಕಲ್ಪಿಸುವ ಬಗ್ಗೆ ಸಮಾಲೋಚನೆ ಮಾಡಲಾಗುವುದು ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದ್ದಾರೆ.

ಈಗಾಗಲೇ ಶಿರಸಿಯಲ್ಲಿ 250 ಬೆಡ್​​ಗಳ ಸುಸಜ್ಜಿತ ಆಸ್ಪತ್ರೆಯ ಕಾಮಗಾರಿ ಆರಂಭವಾಗಿದೆ. ಸುತ್ತಲಿನ ಎಲ್ಲಾ ಭಾಗದ ಜನರಿಗೂ ಆರೋಗ್ಯ ವ್ಯವಸ್ಥೆ ಕಲ್ಪಿಸುವ ದೃಷ್ಟಿಯಿಂದ ಸೂಕ್ತವಾದ ಪ್ರದೇಶದಲ್ಲಿ ತಾತ್ವಿಕವಾಗಿ ಮಾಡಲು ತೀರ್ಮಾನ ಕೈಗೊಂಡಿದ್ದೇವೆ. ಆರ್ಥಿಕ ಇಲಾಖೆ ಸಿಎಂ ಬಳಿಯಿದೆ. ಅವರು ಕೂಡ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಸಭೆಯಲ್ಲಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ಶಿವರಾಂ ಹೆಬ್ಬಾರ್, ಶಾಸಕರಾದ ದಿನಕರ ಶೆಟ್ಟಿ, ರೂಪಾಲಿ ನಾಯಕ್, ಪರಿಷತ್ ಸದಸ್ಯರು ಗಣಪತಿ ಉಳ್ವೇಕರ್, ಶಾಂತಾರಾಮ್ ಸಿದ್ದಿ ಭಾಗಿಯಾಗಿದ್ದರು.

ಉತ್ತರ ಕರ್ನಾಟಕ ಜಿಲ್ಲೆಗೆ ಮಲ್ಟಿಸ್ಪೆಷಾಲಿಟಿ ಆಸ್ತತ್ರೆಯಾಗಬೇಕೆಂಬುದು ಜಿಲ್ಲೆಯ ಜನರ ಬೇಡಿಕೆ. ಇದಕ್ಕೆ ಪೂರಕವಾಗಿ ಇಂದು ಆರೋಗ್ಯ ಸಚಿವರ ಜೊತೆ ಸಭೆ ಮಾಡಿದ್ದೇವೆ. ಉತ್ತರ ಕನ್ನಡ ಜಿಲ್ಲೆಯ ಹೃದಯಭಾಗವಾದ ಕುಮಟಾದ ಆಸುಪಾಸಿನಲ್ಲಿ ಆಸ್ಪತ್ರೆ ಮಾಡಬೇಕೆಂಬ ನಮ್ಮ ಪ್ರಸ್ತಾವನೆಗೆ ಸರ್ಕಾರ ಮತ್ತು ಮಂತ್ರಿಗಳು ಒಪ್ಪಿಕೊಂಡಿದ್ದಾರೆ. ಈಗಿರುವ ಮೆಡಿಕಲ್ ಕಾಲೇಜಿಗೆ ಎಲ್ಲಾ ಸೌಲಭ್ಯ ಒದಗಿಸಿದಾಗ ಆರೋಗ್ಯ ಸಮಸ್ಯೆಗಳು ಪರಿಹಾರವಾಗುತ್ತವೆ.

- ಕೋಟಾ ಶ್ರೀನಿವಾಸ ಪೂಜಾರಿ
ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ