ಬೆಂಗಳೂರು: ಕರ್ಣಾಟಕ ಬ್ಯಾಂಕ್ ಬುಧವಾರ ಬಸವನಗುಡಿಯ ಬುಲ್ಟೆಂಪಲ್ ರಸ್ತೆಯ ಬ್ಯಾಂಕಿನ ಶಾಖೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ 2 ನೂತನ ಶಿಕ್ಷಣ ಸಾಲ ಯೋಜನೆಯನ್ನು ಪರಿಚಯಿಸಿದೆ.
ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ "ಕೆಬಿಎಲ್ ಪೀಕ್' ಹಾಗೂ ವಿದ್ಯಾರ್ಥಿಗಳ ಉಳಿತಾಯ ಖಾತೆ ತೆರೆಯಲು "ಕೆಬಿಎಲ್ ಜೀನಿಯಸ್' ಯೋಜನೆಗಳನ್ನು ಬ್ಯಾಂಕಿನ ಸಿಇಒ ಎಚ್.ಶ್ರೀಕೃಷ್ಣನ್ ಅನಾವರಣ ಮಾಡಿದರು. "ಕೆಬಿಎಲ್ ಪೀಕ್' ಯೋಜನೆಯಡಿ ದೇಶ ಮತ್ತು ಹೊರ ದೇಶಗಳಲ್ಲಿ ಉನ್ನತ ವಿದ್ಯಾಭ್ಯಾಸಕ್ಕಾಗಿ 2 ಕೋಟಿ ರೂ.ವರೆಗೆ ಸಾಲ ಸಿಗಲಿದೆ. ಸಾಲಕ್ಕೆ ವಿಮಾ ಸೌಲಭ್ಯವೂ ದೊರೆಯಲಿದೆ. 16ರಿಂದ 35 ವರ್ಷದೊಳಗಿನ ವಿದ್ಯಾರ್ಥಿಗಳು ಯೋಜನೆಗೆ ಅರ್ಹತೆ ಹೊಂದಿರುತ್ತಾರೆ. ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಪದವಿ ಅಂಕಪಟ್ಟಿ, ಕಾಲೇಜಿನ ಪ್ರವೇಶ ಪತ್ರ, ಪ್ರವೇಶ ಪರೀೆ ಅಂಕಪಟ್ಟಿ ಸೇರಿ ಇತರ ದಾಖಲೆಗಳನ್ನು ನೀಡಬೇಕು ಎಂದು ಎಚ್.ಶ್ರೀಕೃಷ್ಣನ್ ಹೇಳಿದರು.
ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಶೇಖರ್ ರಾವ್ ಮಾತನಾಡಿ, ಅಧ್ಯಯನ ಅವಧಿಯಲ್ಲಿ ಮಾತ್ರ ಸಾಲಕ್ಕೆ ಬಡ್ಡಿ ವಿಧಿಸಲಾಗುವುದು. ಎಸ್ಟಿಎಂ ಕೋರ್ಸ್ನಲ್ಲಿ ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ಬಡ್ಡಿ ರಿಯಾಯಿತಿ ಸೌಲಭ್ಯಸಿಗಲಿದೆ."ಕೆಬಿಎಲ್ ಜೀನಿಯಸ್' ಯೋಜನೆಯಡಿ ವಿದ್ಯಾರ್ಥಿಗಳು ಉಳಿತಾಯ ಖಾತೆ ತೆರೆಯಬಹುದು. ಖಾತೆಗೆ ಉಚಿತ ಸೈಬರ್ ವಿಮೆ ವ್ಯವಸ್ಥೆ ಇರಲಿದೆ ಎಂದು ಮಾಹಿತಿ ನೀಡಿದರು. ಎಂ.ಎಸ್.ರಾಮಯ್ಯ ವಿಶ್ವವಿದ್ಯಾಲಯದ ಉಪಾಧ್ಯಕ್ಷ ಪ್ರದಿಪ್ ಕುಮಾರ್ ದೀತ್, ರಾಷ್ಟ್ರೀಯ ವಿದ್ಯಾಲಯದ ಖಜಾಂಜಿ ವೆಂಕಟೇಶ್ ಬಾಬು ಸೇರಿ ಮತ್ತಿತರರಿದ್ದರು.
ಇತ್ತೀಚಿಗಷ್ಟೇ ಕೈಗಾರಿಕಾ ಸೇರಿ ಬೇರೆ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸಾಲದ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಇದೀಗ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ 2 ನೂತನ ಸಾಲ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಇದರಿಂದ ದೇಶ,ವಿದೇಶಗಳಲ್ಲಿ ಉನ್ನತ ಶಿಕ್ಷಣ ಮಾಡಬೇಕೆಂದು ಕನಸು ಕಾಣುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಯೋಜನೆ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು.
>ರಾಮಸ್ವಾಮಿ ಸುಬ್ರಹ್ಮಣ್ಯ. ಕರ್ಣಾಟಕ ಬ್ಯಾಂಕಿನ ಚೀಫ್ ಆಫೀಸರ್.