ಕಾರ್ಕಳ ಪುರಸಭೆ 
ಜಿಲ್ಲೆ

ಸಮಬಲದ ನಡುವೆ ಬಿಜೆಪಿಗೆ ಅಧಿಕಾರ? ಕಾರ್ಕಳ ಪುರಸಭೆಯಲ್ಲಿ ಗರಿಗೆದರಿದ ರಾಜಕೀಯ

ಇಂದಿರಾ ಎನ್ ಕೆ

ಹರಿಪ್ರಸಾದ್ ನಂದಳಿಕೆ ಕಾರ್ಕಳ

15 ತಿಂಗಳಿಂದ ಆಡಳಿತಾಧಿಕಾರಿಗಳ ಮುತುವರ್ಜಿಯಲ್ಲಿ ಕಾರ್ಯನಿರ್ವಹಿಸಿದ ಕಾರ್ಕಳ ಪುರಸಭೆಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಈ ಬಾರಿ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಸಮಬಲದ ಸದಸ್ಯ ಬಲ ಹೊಂದಿರುವ ಎರಡೂ ಪಕ್ಷಗಳು ಪೈಪೋಟಿಯಲ್ಲಿವೆ. ಈ ನಡುವೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾಗಿದೆ.

23 ಸದಸ್ಯರನ್ನು ಹೊಂದಿರುವ ಪುರಸಭೆಯಲ್ಲಿ 11 ಬಿಜೆಪಿ, 11 ಮಂದಿ ಕಾಂಗ್ರೆಸ್ ಹಾಗೂ ಓರ್ವ ಪಕ್ಷೇತರ ಸದಸ್ಯರಿದ್ದು, ಈ ಭಾರಿಯ ಮೀಸಲಾತಿಗೆ ಬಿಜೆಪಿಯಲ್ಲಿ 11 ಮಂದಿ, ಕಾಂಗ್ರೆಸ್‌ನ 8 ಮಂದಿ ಅರ್ಹರು. ಬಿಜೆಪಿಯ 11 ಮಂದಿ ಸದಸ್ಯರ ಪೈಕಿ ಶೋಭಾ ಆರ್. ದೇವಾಡಿಗ, ಯೋಗೀಶ್ ದೇವಾಡಿಗ, ಶೋಭಾ ಹಿರಿಯ ಸದಸ್ಯರು. 2018ರಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿತ್ತಾದರೂ ಮೀಸಲಾತಿ ಘೋಷಣೆಯಲ್ಲಿ ವಿಳಂಬವಾಗಿ 2019ರಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಗೊಂಡಿತ್ತು. ಆಗ ಬಿಜೆಪಿಯ ಸುಮಾ ಕೇಶವ್ ಅಧ್ಯಕ್ಷರಾಗಿ, ಪಲ್ಲವಿ ಪ್ರವೀಣ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಎರಡೂವರೆ ವರ್ಷ ಆಡಳಿತ ನಡೆಸಿದ್ದರು. ಆ ಬಳಿಕ 15 ತಿಂಗಳಿನಿಂದ ಕುಂದಾಪುರ ಸಹಾಯಕ ಆಯುಕ್ತರು ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.

ಬಿಜೆಪಿ, ಕಾಂಗ್ರೆಸ್ ಸಮಬಲದ ಸ್ಥಾನ ಹೊಂದಿರುವ ಕಾರಣ ಪಕ್ಷೇತರ ಸದಸ್ಯ ಲಕ್ಷ್ಮೀನಾರಾಯಣ ಮಲ್ಯ ಇಲ್ಲಿ ಮುಖ್ಯವಾಗಬೇಕಿತ್ತು. ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಯಲ್ಲಿ ಶಾಸಕ, ಸಂಸದರ ಮತ ಗಣನೆಗೆ ಇರುವುದರಿಂದ ಅವರ ಮತವೇ ನಿರ್ಣಾಯಕವಾಗಲಿದೆ. ಇದರಿಂದ ಬಿಜೆಪಿ ಸದಸ್ಯರೇ ಆಡಳಿತದ ಚುಕ್ಕಾಣಿ ಹಿಡಿಯುವುದು ಖಚಿತವಾದಂತಿದೆ. ಇನ್ನು ಶಾಸಕ, ಸಂಸದರ ಮತ ನಿರ್ಣಾಯಕವಾಗಿರುವುದರಿಂದ ಕಾಂಗ್ರೆಸ್ ಸದಸ್ಯರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಸಾಧ್ಯತೆ ಕಡಿಮೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಆದರೂ ಕಾಂಗ್ರೆಸ್ಸಿನ ಅಸ್ಪಾಕ್ ಅಹಮ್ಮದ್, ಶುಭದ ರಾವ್, ನಳಿನಿ ಆಚಾರ್ಯ, ಪ್ರತಿಮಾ ರಾಣೆ, ಪ್ರಭಾ ಕಿಶೋರ್, ವಿನ್ನಿ ಬೋಲ್ಡ್, ಪ್ರವೀಣ್ ಶೆಟ್ಟಿ, ಸೀತಾರಾಮ ಕೂಡ ಸ್ಪರ್ಧಿಸಲು ಈ ಬಾರಿ ಅರ್ಹರು.

ಹಿರಿಯ ಸದಸ್ಯರಿಗೆ ಮಣೆ?

ಸಾಮಾನ್ಯ ವರ್ಗಕ್ಕೆ ಮೀಸಲಾದ ಹಿನ್ನೆಲೆಯಲ್ಲಿ ಬಿಜೆಪಿಯ ಈ ಹಿಂದೆ ಅಧ್ಯಕ್ಷೆಯಾಗಿದ್ದ ಸುಮಾ ಕೇಶವ್ ಹಾಗೂ ಪಲ್ಲವಿ ಪ್ರವೀಣ್, ಶೋಭಾ ಆರ್. ದೇವಾಡಿಗ, ಯೋಗೀಶ್ ದೇವಾಡಿಗ, ಪ್ರಶಾಂತ ಕೋಟ್ಯಾನ್, ಪ್ರದೀಪ್ ರಾಣೆ, ಶಶಿಕಲಾ ಶೆಟ್ಟಿ,ಮಮತಾ ಪೂಜಾರಿ, ನೀತಾ ಆಚಾರ್ಯ, ಮೀನಾಕ್ಷಿ ಗಂಗಾಧರ್, ಭಾರತಿ ಅಮೀನ್ ಇವರೆಲ್ಲರೂ ಅರ್ಹರಾಗುತ್ತಾರೆ. ಈ ಬಾರಿ ಹಿರಿಯ ಸದಸ್ಯ ಯೋಗೀಶ್ ಅಧ್ಯಕ್ಷರಾಗಿ ಹಾಗೂ ಪ್ರಶಾಂತ್ ಕೋಟ್ಯಾನ್ ಉಪಾಧ್ಯಕ್ಷರಾಗುವ ಸಂಭವವಿದೆ ಎಂದು ಹೇಳಲಾಗುತ್ತಿದ್ದು, ಅಂತಿಮವಾಗಿ ಪಕ್ಷ ತೀರ್ಮಾನ ಕೈಗೊಳ್ಳುವುದರಿಂದ ಯಾರು ಅಧ್ಯಕ್ಷ ಉಪಾಧ್ಯಕ್ಷರಾಗುವರು ಎಂದು ಖಚಿತವಾಗಿ ಹೇಳುವುದು ಅಸಾಧ್ಯ.