ಜಿಲ್ಲೆ

ದೀಪಾವಳಿಯಂತೆ ಕಾರ್ಗಿಲ್ ವಿಜಯೋತ್ಸವ ಆಚರಣೆ: ಕ್ಯಾ.ನವೀನ್ ನಾಗಪ್ಪ ಬಣ್ಣನೆ

Avinash R

ಬೆಳ್ತಂಗಡಿ: ಕಾರ್ಗಿಲ್ ವಿಜಯ ದಿನಾಚರಣೆ ದೀಪಾವಳಿ ಹಬ್ಬದಂತೆ ಸಮಸ್ತ ದೇಶವಾಸಿಗಳಿಂದ ಆಚರಿಸಲ್ಪಡುತ್ತಿರುವುದು ಸಂತಸದ ಸಂಗತಿ ಎಂದು ಕಾರ್ಗಿಲ್ ಯುದ್ಧ ಸೇನಾನಿ ಕ್ಯಾಪ್ಟನ್ ನವೀನ್ ನಾಗಪ್ಪ ಹೇಳಿದರು.

ಬುಧವಾರ ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಎನ್ನೆಸ್ಸೆಸ್ ಘಟಕ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ್ ಬೆಳ್ಳಿಹಬ್ಬ ಆಚರಣೆ ಹಾಗೂ ಕಾರ್ಗಿಲ್ ವಿಜಯ ದಿವಸ್ ಸರಣಿ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಆರಂಭದಲ್ಲಿ ಕಾರ್ಗಿಲ್ ವಿಜಯ ದಿನಾಚರಣೆ ಸೈನ್ಯದಿಂದ ಮಾತ್ರ ಆಚರಿಸಲ್ಪಡುತ್ತಿತ್ತು. ಕ್ರಮೇಣ ನಾಗರಿಕರು ಆಚರಿಸಲು ಆರಂಭಿಸಿದರು. ಪ್ರಸ್ತುತ ದೇಶಾದ್ಯಂತ ವ್ಯಾಪಕವಾಗಿ ಆಚರಿಸಲ್ಪಡುತ್ತಿದೆ. ದೇಶದ ಪ್ರಾಂತೀಯ ಸಮಗ್ರತೆಗಾಗಿ ನಾವು ಹೋರಾಟ ಮಾಡಿದೆವು. ಕಿರಿಯ ವಯಸ್ಸಿನ ಸೈನಿಕರು ಪ್ರಾಣತ್ಯಾಗ ಮಾಡಿದರು ಎಂದರು.

ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್., ಎನ್ನೆಸ್ಸೆಸ್ ಯೋಜನಾಧಿಕಾರಿ ಡಾ.ಮಹೇಶ್ ಕುಮಾರ್ ಶೆಟ್ಟಿ ಎಚ್. ಮಾತನಾಡಿದರು. ಕಾರ್ಗಿಲ್ ವಿಜಯ ದಿವಸದ ಪ್ರಯುಕ್ತ ನಡೆಸಿದ ಭಾಷಣ ಮತ್ತು ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಪಟ್ಟಿ ಎನ್ನೆಸ್ಸೆಸ್ ಯೋಜನಾಧಿಕಾರಿ ಪ್ರೊ.ದೀಪಾ ಆರ್.ಪಿ. ವಾಚಿಸಿದರು. ಗಣ್ಯರು ಬಹುಮಾನ ವಿತರಿಸಿದರು.

ಎನ್ನೆಸ್ಸೆಸ್‌ನ ಭಿತ್ತಿ ಪತ್ರಿಕೆ ಯುವ ಚೇತನದ ನೂತನ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಭಾರತಾಂಬೆ ಭಾವಚಿತ್ರ ಹಾಗೂ ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಲಾಯಿತು. ಅತಿಥಿಯನ್ನು ಸನ್ಮಾನಿಸಲಾಯಿತು. ಪ್ರಥಮ ಬಿಕಾಂ ವಿದ್ಯಾರ್ಥಿ ಶಯನ್ ಕುಮಾರ್ ರಚಿಸಿದ ಪೆನ್ಸಿಲ್ ಸ್ಕೆಚ್ ಅನ್ನು ಅತಿಥಿಗೆ ನೀಡಿದರು.

ಸ್ವಯಂಸೇವಕಿ ಶ್ವೇತಾ ಕೆ.ಜಿ. ನಿರೂಪಿಸಿ, ಸಿಂಚನಾ ಕಲ್ಲೂರಾಯ ವಂದಿಸಿದರು. ಬಳಿಕ ಕ್ಯಾಪ್ಟನ್ ಅವರೊಂದಿಗೆ ಎನ್ನೆಸ್ಸೆಸ್ ಅಧಿಕಾರಿ ಡಾ.ಮಹೇಶ್ ಕುಮಾರ್ ಶೆಟ್ಟಿ ಎಚ್.ಸಂವಾದ ನಡೆಸಿದರು. ವಿದ್ಯಾರ್ಥಿಗಳಿಂದ ಗಾಯನ ಕಾರ್ಯಕ್ರಮ ನಡೆಯಿತು.