ಕನ್ಯಾನದಲ್ಲಿ ಶಿಥಿಲಗೊಂಡಿರುವ ಓವರ್ ಹೆಡ್ ಟ್ಯಾಂಕ್.  
ಜಿಲ್ಲೆ

ಕನ್ಯಾನ ನೀರಿನ ಟ್ಯಾಂಕ್ ಶಿಥಿಲ : ತೆರವಿಗೆ ಸಾರ್ವಜನಿಕರ ಆಗ್ರಹ ; ಹೆದ್ದಾರಿಗೆ ಕುಸಿವ ಭೀತಿ

ಇಂದಿರಾ ಎನ್ ಕೆ

ರೇಂದ್ರ ಎಸ್.ಮರಸಣಿಗೆ ಹೆಬ್ರಿ
ತಾಲೂಕಿನ ಕನ್ಯಾನದಲ್ಲಿರುವ ವಾಟರ್ ಓವರ್‌ಹೆಡ್ ಟ್ಯಾಂಕ್ ಸಂಪೂರ್ಣ ಶಿಥಿಲಗೊಂಡಿದ್ದು, ಅಪಾಯಕಾರಿ ಸ್ಥಿತಿಯಲ್ಲಿದೆ. ಇದನ್ನು ಕೂಡಲೇ ತೆರವುಗೊಳಿಸಿ ಹೊಸ ಟ್ಯಾಂಕ್ ನಿರ್ಮಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

24 ವರ್ಷದ ಹಿಂದೆ ನಿರ್ಮಾಣವಾದ ಟ್ಯಾಂಕ್ 75,000 ಲೀಟರ್ ಸಾಮರ್ಥ್ಯ ಹೊಂದಿದ್ದು, ಕನ್ಯಾನ, ಕೊಳಗುಡ್ಡೆ, ಬನಶಂಕರಿ, ನವಗ್ರಾಮ, ಹಂದಿಗುಳಿ, ಬಾಯಾರಿಬೆಟ್ಟು ಹಾಗೂ ಕನ್ಯಾನ ಡೇರಿ ತನಕ 125 ಮನೆಗಳಿಗೆ ಇದರಿಂದ ನೀರು ಸರಬರಾಜಾಗುತ್ತಿದೆ. ಪಿಲ್ಲರ್, ಟ್ಯಾಂಕ್ ಹಾಗೂ ಕಂಬಗಳಲ್ಲಿ ಸಿಮೆಂಟ್ ಹಿಡಿತ ಬಿಟ್ಟು ಬಹುತೇಕ ಕಡೆ ಕಬ್ಬಿಣದ ರಾಡ್‌ಗಳು ಕಾಣಿಸುತ್ತಿವೆ. ರಾಷ್ಟ್ರೀಯ ಹೆದ್ದಾರಿ 169ಎ ಸಮೀಪವೇ ಟ್ಯಾಂಕ್ ಇರುವುದರಿಂದ ಮತ್ತಷ್ಟು ಅಪಾಯಕಾರಿಯಾಗಿದೆ. ಈಗಾಗಲೇ ಇದರ ಪಕ್ಕದಲ್ಲಿ ಸಣ್ಣಮಟ್ಟದ ಕುಸಿತ ಉಂಟಾಗಿದೆ.

ಉನ್ನತ ಅಧಿಕಾರಿಗಳ ಗಮನಕ್ಕೆ: ಶಿಥಿಲಗೊಂಡ ಟ್ಯಾಂಕ್ ಬಗ್ಗೆ ಹೆಬ್ರಿ ಗ್ರಾಪಂ ವತಿಯಿಂದ ಬಹಳ ಸಮಯದ ಹಿಂದೆಯೇ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ ಅವರು ಮಳೆಗಾಲ ಇದೆ ಎಂದು ಸಬೂಬು ಹೇಳುತ್ತಾರೆ. ಒಂದು ವೇಳೆ ಟ್ಯಾಂಕ್ ಕುಸಿದರೆ ಅಂಗಡಿ ಮುಂಗಟ್ಟುಗಳಿಗೆ ಹಾನಿಯಾಗಲಿದೆ ಮತ್ತು ಅಂಗಡಿ ಪಕ್ಕದಲ್ಲಿ ನಿಂತು ಬಸ್‌ಗಾಗಿ ಕಾಯುವವರಿಗೂ ಅಪಾಯ ಕಟ್ಟಿಟ್ಟ ಬುತ್ತಿ. ಗ್ರಾಮಸಭೆಯಲ್ಲೂ ಈ ಬಗ್ಗೆ ಚರ್ಚೆ ನಡೆದಿದೆ.

ಸಾಮರ್ಥ್ಯ ಕಮ್ಮಿ ಬೇಡಿಕೆ ಹೆಚ್ಚು

ಊರಿನ ಜನರಿಗೆ ಕನಿಷ್ಠ ಒಂದು ಲಕ್ಷ ಲೀಟರ್ ಸಾಮರ್ಥ್ಯದ ಓವರ್‌ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಬೇಡಿಕೆ ಇದೆ. ಜನಸಂಖ್ಯೆ ಹೆಚ್ಚಿದ್ದು, ನೀರಿನ ಪೂರೈಕೆ ಕಡಿಮೆಯಾಗುತ್ತಿದೆ. ಸಂಬಂಧಪಟ್ಟವರು ಇದನ್ನು ಕೆಡವಿ 1 ಲಕ್ಷಕ್ಕಿಂತ ಅಧಿಕ ಲೀಟರ್ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಬೇಕೆಂದು ಸ್ಥಳೀಯರು ಬೇಡಿಕೆ ಇಟ್ಟಿದ್ದಾರೆ.

ಟ್ಯಾಂಕ್ ಶಿಥಿಗೊಂಡ ಬಗ್ಗೆ ವಾರಾಹಿ ಇಂಜಿನಿಯರ್‌ಗಳೊಂದಿಗೆ ಮಾತುಕತೆ ನಡೆದಿದೆ. ಅವರು ಸ್ಥಳ ತನಿಖೆ ನಡೆಸಿದ್ದಾರೆ. ಮಳೆಗಾಲದ ನಂತರದಲ್ಲಿ ಟ್ಯಾಂಕ್ ತೆರವುಗೊಳಿಸಿ ಹೊಸ ಟ್ಯಾಂಕ್ ನಿರ್ಮಾಣ ಮಾಡಲಾಗುವುದು. ಮಳೆಗಾಲ ಇರುವುದರಿಂದ ಅಲ್ಲಿಗೆ ಹೋಗುವ ದಾರಿ ಕೂಡ ಅಪಾಯಕಾರಿ. -ಪ್ರಸನ್ನರಾವ್ ಜೆಇ, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಕಾರ್ಕಳ
-ಪ್ರಸನ್ನರಾವ್ ಜೆಇ, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಕಾರ್ಕಳ
ವಾಟರ್ ಓವರ್‌ಹೆಡ್ ಟ್ಯಾಂಕ್ ಶಿಥಿಲಗೊಂಡು ಕೆಲ ಸಮಯ ಕಳೆದಿದೆ. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಶಿಥಿಲಾವಸ್ಥೆಯಲ್ಲಿ ಇರುವುದರಿಂದ ತೆರವುಗೊಳಿಸಿ ನೂತನವಾಗಿ ಟ್ಯಾಂಕ್ ನಿರ್ಮಾಣ ಮಾಡಬೇಕು. -ಎಚ್.ಜನಾರ್ದನ್, ಹೆಬ್ರಿ ಗ್ರಾಪಂ ಸದಸ್ಯ
-ಎಚ್.ಜನಾರ್ದನ್, ಹೆಬ್ರಿ ಗ್ರಾಪಂ ಸದಸ್ಯ