ಜಿಲ್ಲೆ

ಅ.15ಕ್ಕೆ ಕನ್ನಡ ಜಂಗಮ ಗ್ರಂಥ ಲೋಕಾರ್ಪಣೆ; ಹೋರಾಟಗಾರ ಪಾಲನೇತ ಅಭಿನಂದನೆ ಸಮಾರಂಭ

ಬೆಂಗಳೂರು : ಅ.15 (ಬುಧವಾರ) ಸಂಜೆ 5.30ಕ್ಕೆ. ನಗರದ ರವೀಂದ್ರ ಕಲಾಕ್ಷೇತ್ರ ಕನ್ನಡಪರ ಹೋರಾಟಗಾರ, ಚಿಂತಕ ಪಾಲನೇತ್ರ ಅಭಿನಂದನೆ ಸಮಾರಂಭ ಏರ್ಪಡಿಸಲಾಗಿದೆ ಎಂದು ಅಭಿನಂದನಾ ಸಮಿತಿ ಅಧ್ಯಕ್ಷ ಹೆಚ್.ಶಿವರಾಮೇಗೌಡ ತಿಳಿಸಿದ್ದಾರೆ.

ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸಾರ್ವಜನಿಕ ಮತ್ತು ಕನ್ನಡಪರ ಸೇವಾಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಪಾಲನೇತ್ರ ಅವರ ಕುರಿತ ‘ಕನ್ನಡ ಜಂಗಮ’ ಅಭಿನಂದನಾ ಗ್ರಂಥವನ್ನು ಇದೇ ವೇಳೆ ಲೋಕಾರ್ಪಣೆ ಮಾಡಲಾಗುವುದು. ಕನ್ನಡ ನಾಡು ನುಡಿ ಸೇವೆಯ ಜೊತೆಗೆ ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲೂ ತಮ್ಮ ಸೇವೆಯನ್ನು ವಿಸ್ತರಿಸಿಕೊಂಡಿರುವ ಪಾಲನೇತ್ರ ಅವರ ಕುರಿತು ಹಲವು ಗಣ್ಯರು ಬರೆದಿರುವ ಲೇಖನಗಳ ಸಂಪಾದಿತ ಗ್ರಂಥ ಇದಾಗಿದೆ.

ಸಿದ್ದಗಂಗಾ ಮಠದ ಶ್ರೀಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ‘ಕನ್ನಡ ಜಂಗಮ’ ಗ್ರಂಥವನ್ನು ಭಾರತ ಸರ್ಕಾರದ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಲೋಕಾರ್ಪಣೆ ಮಾಡಲಿದ್ದಾರೆ. ಕನಕಪುರ ದೇಗುಲಮಠ, ನೆಲಮಂಗಲದ ಬಸವಣ್ಣ ದೇವರ ಮಠದ ಶ್ರೀಗಳು ಮಾಜಿ ಸಚಿವ ಹೆಚ್.ಎಂ. ರೇವಣ್ಣ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ.ಸೋಮಶೇಖರ್, ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಶಿವರಾಮೇಗೌಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.