ಉಪ್ಪಿನಂಗಡಿ: ಎಳೆಯ ಮಕ್ಕಳಿಗೆ ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ ನಾ ಕಂಡ ನಮ್ಮೂರ ವಿಶೇಷತೆ ಎಂಬ ಬರಹ ಯೋಜನೆಯಲ್ಲಿ 26 ವಿದ್ಯಾರ್ಥಿಗಳು ಭಾಗವಹಿಸಿದ್ದು ಶ್ಲಾಘನಾರ್ಹ ವಿಚಾರ. ಬರೆಯುವುದಕ್ಕೆ ಪ್ರೇರಣೆ ಮತ್ತು ಪ್ರೋತ್ಸಾಹ ನೀಡುವ ಮೂಲಕ ಸಾಹಿತ್ಯ ಪರಿಷತ್ ಉಪ್ಪಿನಂಗಡಿ ಹೋಬಳಿ ಘಟಕ ಪ್ರಶಾಂಸನಾರ್ಹ ಕಾರ್ಯ ಮಾಡಿದೆ ಎಂದು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್
ಶನಿವಾರ ಉಪ್ಪಿನಂಗಡಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಉಪ್ಪಿನಂಗಡಿ ಹೋಬಳಿ ಘಟಕದ ಆಶ್ರಯದಲ್ಲಿ ಜರುಗಿದ ಕನ್ನಡ ಕಲರವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ವಿಶ್ರಾಂತ ಉಪನ್ಯಾಸಕ ಮಹಾಲಿಂಗೇಶ್ವರ ಭಟ್ ಗದ್ಯ, ಪದ್ಯ, ನಾಟಕಗಳ ಮೂಲಕ ಸಾಹಿತಿಗಳಾಗಬಹುದು. ಮೊದಲು ನಾಲ್ಕು ಸಾಲಿನ ಚುಟುಕುಗಳನ್ನು ರಚಿಸುವ ಹವ್ಯಾಸವನ್ನು ಬೆಳೆಸಿಕೊಂಡರೆ ಮುಂದೆ ತಾನಾಗಿ ಕವನಗಳು ರಚಿಸಲ್ಪಡುತ್ತವೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ ಕನ್ನಡ ಸಾಹಿತ್ಯ ಪರಿಷತ್ ಉಪ್ಪಿನಂಗಡಿ ಹೋಬಳಿ ಘಟಕದ ಅಧ್ಯಕ್ಷ ಕರುಣಾಕರ ಸುವರ್ಣ ಮಾತನಾಡಿ, ಎಳೆಯ ಮಕ್ಕಳಲ್ಲಿ ಬರವಣಿಗೆಯ ಆಸಕ್ತಿ ಕೆರಳಿಸಲು ಕನ್ನಡ ಕಲರವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಹೋಬಳಿ ಘಟಕದ ಗೌರವ ಕಾರ್ಯದರ್ಶಿ ಉದಯ ಕುಮಾರ್, ಗೌರವ ಕೋಶಾಧಿಕಾರಿ ಡಾ. ಗೋವಿಂದ ಪ್ರಸಾದ್ ಕಜೆ ದುರ್ಗಾಮಣಿ, ವಿನಯಾ ಆರ್ ರೈ, ಮಂಜುಳಾ ಸೀತಾರಾಮ್, ಶಶಿಧರ್ ಶೆಟ್ಟಿ, ಯತೀಶ್ ಶೆಟ್ಟಿ, ಸಲಾಂ ಮೇದರಬೆಟ್ಟು, ಸುನಿತಾ, ಗಿರಿಜಾ, ವಿನಯ ಯು ಮೊದಲಾದವರು ಉಪಸ್ಥಿತರಿದ್ದರು.
ಇಂದ್ರಪ್ರಸ್ಥ ವಿದ್ಯಾಲಯದ ಮುಖ್ಯ ಶಿಕ್ಷಕಿ ವೀಣಾ ಪ್ರಸಾದ್ ಸ್ವಾಗತಿಸಿ, ಘಟಕದ ಸಂಘಟನಾ ಕಾರ್ಯದರ್ಶಿ ನವೀನ್ ಬ್ರಾಗ್ಸ್ ವಂದಿಸಿದರು. ಘಟಕದ ಸದಸ್ಯರಾದ ಸುಂದರಿ ಸುಕುಮಾರ್ ಹಾಗೂ ವಿಮಲಾ ತೇಜಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ತ್ರಿವೇಣಿ ಸಹಕರಿಸಿದರು. ಗ್ರಾಮದ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.