ಮಂಜೇಶ್ವರ: ವಯೋಸಹಜ ಅನಾರೋಗ್ಯ, ಮುರಿದು ಬೀಳುವ ಸ್ಥಿತಿಯಲ್ಲಿರುವ ಮನೆ, ಮಂಜಾದ ಕಣ್ಣುಗಳು, ಒಪ್ಪೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ. ಹೀಗಿರುವಾಗ ಔಷಧ ಖರೀದಿ, ಮನೆ ದುರಸ್ತಿ ಮಾಡಿಸುವುದು ಈ ಏಕಾಂಗಿ ವೃದ್ಧನಿಗೆ ಗಗನ ಕುಸುಮವೇ ಸರಿ.
ಹೌದು, ಇದು ವರ್ಕಾಡಿ ಗ್ರಾ.ಪಂ. 3ನೇ ವಾರ್ಡ್ ನಾಟೇಕಲ್ ತೌಡುಗೋಳಿ ಸಮೀಪದ ನಿವಾಸಿ 73 ವರ್ಷದ ಅಣ್ಣಪ್ಪ ನಾಯಕ್ ಎಂಬುವರ ದಯನೀಯ ಸ್ಥಿತಿ. ಈ ಅಸಹಾಯಕ ವೃದ್ಧನ ಪರಿಸ್ಥಿತಿಗೆ ಮರುಗಿದ ಸ್ಥಳೀಯರು ಸ್ಥಳೀಯಾಡಳಿತದ ಗಮನಕ್ಕೆ ತಂದರೂ ವರ್ಕಾಡಿ ಗ್ರಾಮ ಪಂಚಾಯಿತಿ ಆಡಳಿತ ಮಾತ್ರ ನೆರವಿಗೆ ಧಾವಿಸಿಲ್ಲ. ವೃದ್ಧನ ಮನೆಗೆ ಕನಿಷ್ಠ ವಿದ್ಯುತ್ ಸಂಪರ್ಕವನ್ನು ಕಲ್ಪಿಸುವ ನಿಟ್ಟಿನಲ್ಲಿಯೂ ಗಮನ ಹರಿಸಿಲ್ಲ.
ಅನಾರೋಗ್ಯದಿಂದ ಬಸವಳಿದಿದ್ದರೂ ಆಶಾ ಕಾರ್ಯಕರ್ತೆ ಮನೆಯನ್ನು ಸಂಪರ್ಕಿಸಿಲ್ಲ. ಮನೆ ಮುಂದೆ ಇರುವ ಬಾವಿಗೆ ತಡೆಗೋಡೆ ಇಲ್ಲದೆ ಅಪಾಯಕಾರಿ ಸ್ಥಿತಿಯಲ್ಲಿದೆ. ಅಣ್ಣಪ್ಪ ನಾಯಕ್ ಅವರನ್ನು ಬಿಪಿಎಲ್ ಪಟ್ಟಿಯಲ್ಲಿ ಸೇರಿಸದೆ, ಔಷಧ ನೀಡದ ಪಲೇಟಿವ್ ಕೇರ್ ವಿಭಾಗ, ಸೋರುತ್ತಿರುವ ಮನೆ ದುರಸ್ತಿಗೆ ಹಣ ನೀಡದೆ ಸತಾಯಿಸುತ್ತಿದೆ. 10 ದಿನಗಳ ಒಳಗಾಗಿ ಸಮಸ್ಯೆ ಬಗೆಹರಿಸದಿದ್ದಲ್ಲಿ ಆಡಳಿತದ ಬೇಜವಾಬ್ದಾರಿಯ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ ಎಂದು ಬಿಜೆಪಿ ವರ್ಕಾಡಿ ಪಂಚಾಯತಿ ಸಮಿತಿ ಎಚ್ಚರಿಸಿದೆ. ಬಿಜೆಪಿ ಮುಖಂಡರಾದ ಭಾಸ್ಕರ್ ಪೊಯ್ಯೆ, ಆದರ್ಶ ಬಿ.ಎಂ, ಮಣಿಕಂಠ ರೈ, ಯತಿರಾಜ್ ಶೆಟ್ಟಿ, ಎ.ಕೆ.ಕಯ್ಯಾರ್, ವಿವೇಕಾನಂದ, ನಾಗೇಶ್ ಬಳ್ಳೂರ್, ರವಿರಾಜ್ ಮೊದಲಾದವರು ವೃದ್ಧನ ಮನೆಗೆ ಬಂದು ಪರಿಸ್ಥಿತಿ ಅವಲೋಕಿಸಿದ್ದಾರೆ.