ಜಿಲ್ಲೆ

ಕನಕ ಗೌರವ, ಕನಕ ಯುವ ಪರಸ್ಕಾರ ಪ್ರಕಟ; ಡಾ. ಅಕ್ಕಮಹಾದೇವಿ, ಡಾ ರವೀಂದ ಲಂಜವಾಡಕರ್ ಆಯ್ಕೆ

ಬೆಂಗಳೂರು: ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ನೀಡುವ 2025-26ನೇ ಸಾಲಿನ ಕನಕ ಗೌರವ ಪುರಸ್ಕಾರ ಮತ್ತು ಕನಕ ಯುವ ಪುರಸ್ಕಾರ ಪ್ರಕಟಗೊಂಡಿವೆ.

ಮೈಸೂರು ಮೂಲದವರಾದ ಡಾ. ಅಕ್ಕಮಹಾದೇವಿಯವರು ಕನಕ ಗೌರವ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಲಂಜವಾಡ ಗ್ರಾಮದ ಡಾ.ರವೀಂದ್ರ ಲಂಜವಾಡಕರ್ ಕನಕ ಯುವ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

ಮೈಸೂರಿನ ಮಾನಸ ಗಂಗೋತ್ರಿಯ ಕುವೆಂಪು ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕಿಯಾಗಿದ್ದ ಡಾ.ಅಕ್ಕಮಹಾದೇವಿ ‘ಪುರಂದರ ದಾಸರ ಹಾಗೂ ಅನ್ನಮಾಚಾರ್ಯರ ಕೀರ್ತನೆಗಳ ತೌಲನಿಕ ಅಧ್ಯಯನದಲ್ಲಿ ಡಾಕ್ಟರೇಟ್ ಪಡೆದಿದ್ದು, ಹಲವು ಗ್ರಂಥ, ಲೇಖನಗಳನ್ನು ಬರೆದಿದ್ದಾರೆ. 2025ನೇ ಸಾಲಿನ ಕನಕ ಗೌರವ ಪುರಸ್ಕಾರ ಪ್ರಶಸ್ತಿಗೆ ಭಾಜನರಾಗಿದ್ದು, ಪುರಸ್ಕಾರವು 75 ಸಾವಿರ ನಗದು, ಪ್ರಶಸ್ತಿ ಫಲಕ ಮತ್ತು ಪುತ್ಥಳಿಯನ್ನು ಒಳಗೊಂಡಿದೆ.

ವೃತ್ತಿಯಿಂದ ಪ್ರಥಮ ದರ್ಜೆ ಸಹಾಯಕರಾದ ಡಾ.ರವೀಂದ್ರ ಪ್ರವೃತ್ತಿಯಿಂದ ಸಾಹಿತಿಗಳೂ, ಬರಹಗಾರರಾಗಿದ್ದಾರೆ. ‘ಸಮಾಜಮುಖಿ ದಾಸ ಸಾಹಿತ್ಯ ಕೃತಿಗೆ ಡಾಕ್ಟರೇಟ್ ಪಡೆದಿರುವ ಶ್ರೀಯುತರನ್ನು ಕನಕ ಯುವ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದ್ದು, ಪುರಸ್ಕಾರವು 50 ಸಾವಿರ ನಗದು, ಪ್ರಶಸ್ತಿ ಫಲಕ ಮತ್ತು ಪುತ್ಥಳಿಯನ್ನು ಒಳಗೊಂಡಿದೆ.