ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಆ್ಯಂಡ್ ಸೈನ್ಸ್ ಕಾಲೇಜಿನ ಪದವಿ ಪ್ರದಾನ ಕಾರ್ಯಕ್ರಮ ಮತ್ತು ಕಾಲೇಜಿನ ವಾರ್ಷಿಕೋತ್ಸವ ನಡೆಯಿತು.  
ಜಿಲ್ಲೆ

ವಿದ್ಯಾರ್ಥಿಗಳಿಂದ ಉನ್ನತ ಶಿಕ್ಷಣಕ್ಕೆ ಆದ್ಯತೆ

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಪದವಿ ಶಿಕ್ಷಣ ಮುಗಿಸಿದ ಮಾತ್ರಕ್ಕೆ ಶೈಕ್ಷಣಿಕ ಜೀವನ ಕೊನೆಗೊಳಿಸದೆ ಉನ್ನತ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಪದವಿ ಶಿಕ್ಷಣ ಪಡೆಯಲು ಕಾರಣರಾದ ಪಾಲಕರಿಗೆ ಗೌರವ, ಪ್ರೀತಿ ಅರ್ಪಿಸುವ ಮೂಲಕ ಸಾಧನೆ ಪಥದಲ್ಲಿ ಮುನ್ನಡೆಯಬೇಕು ಎಂದು ಪಿ.ಎ. ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ರಮೀಸ್ ಎಂ.ಕೆ. ಹೇಳಿದರು.

ಗುರುವಾರ ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಆ್ಯಂಡ್ ಸೈನ್ಸ್ ಕಾಲೇಜಿನ 2023-2024ರ ಸಾಲಿನ ವಿದ್ಯಾರ್ಥಿನಿಯರಿಗೆ ಪದವಿ ಪ್ರದಾನ ಕಾರ್ಯಕ್ರಮ ಮತ್ತು ಕಾಲೇಜಿನ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.

ಕಣಚೂರು ಶಿಕ್ಷಣ ಸಂಸ್ಥೆ ಸ್ಥಾಪಕ ಯು.ಕೆ.ಮೋನು ಅಧ್ಯಕ್ಷತೆ ವಹಿಸಿ, ಶಿಕ್ಷಣ ಯಶಸ್ವಿಯಾಗಿ ಮುಗಿಸಿ, ಉನ್ನತ ಶಿಕ್ಷಣ ಪಡೆದು ದೇಶಕ್ಕಾಗಿ ತನ್ನಿಂದಾದ ಕೊಡುಗೆ ಕೊಡಲು ಮುಂದಾದಾಗ ಸಮಾಜ, ಪಾಲಕರು, ಸಂಸ್ಥೆಗೂ ಹೆಮ್ಮೆ ತಂದಂತಾಗುತ್ತದೆ ಎಂದರು.

ಕಾಲೇಜಿನ ವಾರ್ಷಿಕ ಸಂಚಿಕೆ ‘ಕಣಜ’ ಬಿಡುಗಡೆಗೊಳಿಸಲಾಯಿತು. ಕಣಚೂರು ಶಿಕ್ಷಣ ಸಂಸ್ಥೆ ಸಲಹಾ ಮಂಡಳಿ ಅಧ್ಯಕ್ಷ ಪ್ರೊ.ಎಂ.ಅಬ್ದುಲ್ ರೆಹಮಾನ್, ಕಣಚೂರು ವೈದ್ಯಕೀಯ ಕಾಲೇಜಿನ ಮುಖ್ಯಅಧೀಕ್ಷಕ ಡಾ.ಹರೀಶ್ ಶೆಟ್ಟಿ, ಡೀನ್ ಡಾ.ಷಹನವಾಜ್ ಮಣಿಪಾಡಿ, ಪಪೂ ಕಾಲೇಜಿನ ಪ್ರಾಂಶುಪಾಲೆ ಶಹದಾ, ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲೆ ಕರೆನ್ ಡಿಸೋಜ, ಪ್ರೈಮರಿ ಸ್ಕೂಲ್ ಪ್ರಾಂಶುಪಾಲೆ ಲಿನೆಟ್ ಡಿಸೋಜ ಉಪಸ್ಥಿತರಿದ್ದರು.

ಪ್ರಾಂಶುಪಾಲ ಪ್ರೊ.ಇಕ್ಬಾಲ್ ಅಹಮ್ಮದ್ ಯು.ಟಿ. ಸ್ವಾಗತಿಸಿದರು. ಉಪನ್ಯಾಸಕಿ ತೇಜಶ್ರೀ ಕಾಲೇಜಿನ ವರದಿ ವಾಚಿಸಿದರು. ಉಷಾ ಪದವೀಧರರ ಹೆಸರು ವಾಚಿಸಿದರು. ನಿಗರ್‌ಜಹಾನ್ ವಂದಿಸಿದರು. ಮುಬೀನ್ ತಾಜ್ ನಿರೂಪಿಸಿದರು.