ಕಾರವಾರ: ಹಳೆಯ (Kali Bridge) ಕಾಳಿ ಸೇತುವೆಯ ಅವಶೇಷಗಳ ತೆರವು ಕಾರ್ಯವನ್ನು ಮಾರ್ಚ್ 15 ರೊಳಗೆ ಸಂಪೂರ್ಣವಾಗಿ ಮುಕ್ತಾಯಗೊಳಿಸುವಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಸೂಚಿಸಿದರು.
ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅದ್ಯಕ್ಷತೆ ವಹಿಸಿ ಮಾತನಾಡಿದರು.
ಹೆದ್ದಾರಿ ಬದಿಯಲ್ಲಿ ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ಅತಿಕ್ರಮಣ ಕಟ್ಟಡಗಳನ್ನು ಕಾಲಮಿತಿಯಲ್ಲಿ ತೆರವುಗೊಳಿಸುವಂತೆ ಕುಮಟಾ ಉಪ ವಿಭಾಗಾಧಿಕಾರಿಗಳು ಮತ್ತು ಅಂಕೋಲಾ ತಹಸೀಲ್ದಾರ್ ಸೂಚಿಸಿದರು. ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಜಿ.ಎಸ್.ಐ ವತಿಯಿಂದ ಗುರುತಿಸಲಾಗಿರುವ ಗುಡ್ಡ ಕುಸಿತ ಪ್ರದೇಶಗಳಲ್ಲಿ ಮಳೆಗಾಲಕ್ಕೂ ಮುನ್ನ ಸುರಕ್ಷತಾ ಕ್ರಮಗಳನ್ನು ಕೈಗೊಂಡು , ಆ ಪ್ರದೇಶದಲ್ಲಿ ಗುಡ್ಡ ಕುಸಿತವಾಗುವುದನ್ನು ತಡೆಯುವಂತೆ ಹೆದ್ದಾರಿ ಪ್ರಾಧಿಕಾರದ ಆಧಿಕಾರಿಗಳಿಗೆ ಕಟ್ಟಿನಿಟ್ಟಿನ ಸೂಚನೆ ನೀಡಿದರು.
ಕಾರವಾರ ಕಾಜುಬಾಗ ಹಾಗೂ ಸದಾಶಿವಗಡದ ನಡುವೆ ಕಾಳಿ ಸೇತುವೆಗೆ ಕಟ್ಟಲಾಗಿರುವ ಸೇತುವೆ ಆಗಸ್ಟ್ 7 ರಂದು ಕುಸಿದು ಬಿದ್ದಿತ್ತು. ಸೇತುವೆಯ ಮಿಕ್ಕುಳಿದ ಭಾಗಗಳನ್ನು ತೆರವು ಮಾಡುವ ಕಾರ್ಯವನ್ನು ಚತುಷ್ಪಥ ಗುತ್ತಿಗೆ ಪಡೆದ ಐಆರ್‌ಬಿ ಕಂಪನಿ ನಡೆಸಿದೆ.
ಕಳೆದ ಒಂದು ತಿಂಗಳಿಂದ ಕಾಮಗಾರಿ ನಿಧಾನಗತಿಯಲ್ಲಿ ನಡೆದಿದೆ. ಅದೇ ಜಾಗದಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಯೋಜನೆ ರೂಪುಗೊಂಡಿದ್ದು, ಶೀಘ್ರ ತೆರವು ಕಾರ್ಯ ಮುಕ್ತಾಯಗೊಳಿಸುವಂತೆ ಡಿಸಿ ಸೂಚಿಸಿದ್ದಾರೆ.
ಇದನ್ನೂ ಓದಿ: ರಾಜಕೀಯ ಕಾರಣಗಳಿಂದ ಮೇಕೆದಾಟುವಿಗೆ ಅನುಮತಿ ವಿಳಂಬ: DCM DK Shivakumarhttps://www.vijayavani.net/mekedatu-delayed-due-to-political-reasons-dcm-dk-shivakumar