ಕಲಬುರಗಿ: ಇಲ್ಲಿನ ಜಿಮ್ಸ್ ಆಸ್ಪತ್ರೆ ಕೋವಿಡ್ ವಾಡ್೯ನಲ್ಲಿ ಅತ್ಯಾಚಾರ ಯತ್ನದಿಂದ ಪಾರಾಗಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.
ಘಟನೆಯ ನಂತರ ಯುವತಿ ಮಾನಸಿಕವಾಗಿ ನೊಂದಿದ್ದಳು. ಚಿಕಿತ್ಸೆ ಫಲಿಸದೇ ಇಂದು ಮಧ್ಯಾಹ್ನ ಸಾವಿಗೀಡಾಗಿದ್ದಾಳೆ.
25 ವರ್ಷದ ಯುವತಿ ಕರೊನಾ ಸೋಂಕು ತಗುಲಿ, ಜಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಜೂನ್ 8ರಂದು ರಾತ್ರಿ ಅಲ್ಲಿಗೆ ಬಂದ ಖಾಸಗಿ ಆಂಬುಲೆನ್ಸ್ ಚಾಲಕ ಪಿಂಟು ಎಂಬಾತ ಯುವತಿ ಮಲಗಿದ್ದಾಗ ಆಕೆಯ ಡೈಪರ್ ಮತ್ತು ಯೂರಿನ್ ಪೈಪ್ ತೆಗೆದು ಅತ್ಯಾಚಾರಕ್ಕೆ ಯತ್ನಿಸಿದ್ದ.
ಯುವತಿ ಎಚ್ಚರಗೊಂಡು ಚೀರಾಡುತ್ತಿದ್ದಂತೆ ಅಕ್ಕ-ಪಕ್ಕದ ರೋಗಿಗಳು ಎಚ್ಚರಗೊಳ್ಳುತ್ತಿದ್ದಂತೆ ಆರೋಪಿ ಪಿಂಟು ಅಲ್ಲಿಂದ ಓಡಿಹೋಗಿದ್ದ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಬ್ರಹ್ಮಪುರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಅಲ್ಲದೆ, ಆರೋಪಿ ಪಿಂಟುನನ್ನು ಬಂಧಿಸಿದ್ದಾರೆ. (ದಿಗ್ವಿಜಯ ನ್ಯೂಸ್)