ಜಿಲ್ಲೆ

Jatra 2 ದಿನಗಳ ಕದ್ರಾ ಜಾತ್ರೆ ಸಂಪನ್ನ

Uttara Kannada - Subash Hegde

ಕಾರವಾರ: ಕದ್ರಾದ ಮಹಾಮಾಯಾ ದೇವಿಯ ಜಾತ್ರಾ (Jatra) ಮಹೋತ್ಸವವು ಬುಧವಾರ ಭಕ್ತಿ, ವಿಜೃಂಭಣೆಯಿಂದ ಜರುಗಿತು. ಮಂಗಳವಾರ ಶಿಂಗೇವಾಡಿಯ ಮಹಾಮಾಯಾ ದೇವಸ್ಥಾನದಲ್ಲಿ ಹವನ ಹಾಗೂ ವಿಶೇಷ ಪೂಜೆಗಳು ಜರುಗಿದವು. ನಂತರ ಬುಧವಾರ ಬೆಳಗ್ಗೆ ಪಲ್ಲಕ್ಕಿಯಲ್ಲಿ ದೇವರನ್ನು ಕದ್ರಾ ಮಾರುಕಟ್ಟೆಯ ಸಮೀಪದ ಜಾತ್ರೆ ಕಟ್ಟೆಗೆ ತಂದು ಪ್ರತಿಷ್ಠಾಪಿಸಲಾಯಿತು. ಗೋವಿಂದ ಮಿರಾಶಿ ಕುಟುಂಬದವರು ಪೂಜೆ ಸಲ್ಲಿಸಿದ ಬಳಿಕ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಭಕ್ತರು, ದೇವಿಗೆ ಉಡಿ, ತುಂಬಿ, ತುಲಾಭಾರ, ಹಣ್ಣುಕಾಯಿ, ಬಲಿ ಮುಂತಾದ ಸೇವೆಗಳನ್ನು ಅರ್ಪಿಸಿದರು. ಸಾವಿರಾರು ಭಕ್ತರು ಸರದಿಯಲ್ಲಿ ನಿಂತು ದರ್ಶನ ಪಡೆದರು. ರಾತ್ರಿ ಬಲಿ ಸೇವೆ ನಡೆಯಿತು.

ಭತ್ತದ ಕದಿರಿನ Jatra

ಕದ್ರಾದ ಶಿಂಗೆವಾಡಿಯ ಮಹಾಮಾಯಾ ದೇವಿಯನ್ನು ಶಕ್ತಿ ದೇವತೆ ಎಂದು ಸ್ಥಳೀಯರು ನಂಬುತ್ತಾರೆ. ಕೈಗಾ ಅಣು ಸ್ಥಾವರ, ಕದ್ರಾ ಜಲ ವಿದ್ಯುತ್ ಯೋಜನೆ ಮುಂತಾದ ವಿದ್ಯುತ್ ಉತ್ಪಾದನಾ ಸಂಸ್ಥೆಗಳ ನೌಕರರು ಮಾತ್ರವಲ್ಲದೇ ಬೇರೆ ಊರುಗಳ ಜನರೂ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಕಾರವಾರ ಭಾಗದಲ್ಲಿ ವರ್ಷದಲ್ಲಿ ನಡೆಯುವ ಮೊದಲ ಜಾತ್ರೆ ಇದಾಗಿದೆ. ದೇವಿಯ ಪಲ್ಲಕ್ಕಿಯ ಜತೆ ಭತ್ತದ ಕದಿರನ್ನು ಹೊತ್ತು ತಂದು ನಂತರ ಜಾತ್ರೆ ಗದ್ದುಗೆಯಲ್ಲಿ ಕುಳಿತ ಉತ್ಸವ ಮೂರ್ತಿಯನ್ನು ಭತ್ತದ ಕದಿರಿನಿಂದಲೇ ಅಲಂಕರಿಸುವುದು ವಿಶೇಷ. ಇದೇ ಕಾರಣಕ್ಕೆ ಊರಿಗೆ ಕದಿರು, ಕದ್ರಾ ಎಂದು ಹೆಸರು ಬಂದಿರಬಹುದು ಎಂದು ಊಹಿಸಲಾಗಿದೆ.