ಕಡಬ: ತುರ್ತು ಸಂದರ್ಭ ಜನರ ಆರೋಗ್ಯ ಕಾಪಾಡಿ ಸಾವಿರಾರು ಜನರಿಗೆ ಆಪದ್ಭಾಂಧವನಾಗಿದ್ದ ಕಡಬದ 108 ಆಂಬುಲೆನ್ಸ್‌ನ ಟಯರ್ ಸವೆದ ಕಾರಣ ಒಂದು ತಿಂಗಳಿನಿಂದ ಸೇವೆ ಒದಗಿಸದೆ ನಿಂತಲ್ಲೆ ನಿಂತಿದೆ. ತುರ್ತು ಸೇವೆಗಳಿಗೆ ಪಕ್ಕದ ಊರುಗಳ ವಾಹನವನ್ನು ಆಶ್ರಯಿಸಬೇಕಾದ ಅನಿವಾರ್ಯತೆ ಕಡಬದ ಜನತೆ ಎದುರಾಗಿದೆ.
ಕಳೆದ ಒಂದೂವರೆ ದಶಕದಿಂದ ಕಡಬದಲ್ಲಿ 108 ಆಂಬುಲೆನ್ಸ್ ಉಚಿತ ಸೇವೆ ನೀಡುತ್ತಿದ್ದು, ಈ ಹಿಂದೆ 2012 ನವೆಂಬರ್‌ನಲ್ಲಿ ಕುಂಟು ನೆಪವೊಡ್ಡಿ ಆಂಬುಲೆನ್ಸನ್ನು ಹೊರಜಿಲ್ಲೆಗೆ ಕಳುಹಿಸಲಾಗಿತ್ತು. ತಿಂಗಳುಗಳ ಕಾಲ ಕಾದ ಕಡಬದ ಜನತೆ 2013 ಜನವರಿ 7ರಂದು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದರಿಂದ ಮತ್ತೆ ಕಡಬಕ್ಕೆ ಹೊಸ ಆಂಬುಲೆನ್ಸ್ ನೀಡಲಾಗಿತ್ತು. ಗ್ರಾಮೀಣ ಪ್ರದೇಶವಾದ ಕಡಬವನ್ನು ಕೇಂದ್ರೀಕರಿಸಿ ಕಾರ್ಯಾಚರಿಸುತ್ತಿದ್ದ ಆಂಬುಲೆನ್ಸ್‌ನಲ್ಲಿ 2020ರಲ್ಲಿ ಟಯರ್ ಸಮಸ್ಯೆ ಎದುರಾಗಿ ವಾರಗಟ್ಟಲೆ ಮೂಲೆಗೆ ಸರಿದಿತ್ತು. 2024ರ ಏಪ್ರಿಲ್‌ನಲ್ಲಿ ಕಡಬಕ್ಕೆ ಅತ್ಯಾಧುನಿಕ ವೆಂಟಿಲೇಟರ್ ಇರುವ ಹೊಸ ಆಂಬುಲೆನ್ಸ್ ವಾಹನವನ್ನು ನೀಡಲಾಗಿದ್ದು, ಸುವಾರು 40 ಸಾವಿರಕ್ಕೂ ಅಧಿಕ ಕಿಲೋಮೀಟರ್ ಓಡಿದ್ದರಿಂದಾಗಿ ಟಯರ್ ಸವೆದಿದೆ. ಟಯರ್ ಬದಲಾವಣೆ ವಾಡದ ಕಾರಣ ಕಳೆದ ಡಿಸೆಂಬರ್ 6ರಿಂದ ಆಂಬುಲೆನ್ಸನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರದ ವಠಾರದಲ್ಲಿ ನಿಲ್ಲಿಸಲಾಗಿದೆ. ಜನರು ತುರ್ತು ಸಂದರ್ಭ ಪಕ್ಕದ ಆಲಂಕಾರು, ಬೆಳ್ಳಾರೆ, ಶಿರಾಡಿ, ಸುಬ್ರಹ್ಮಣ್ಯದಿಂದ ಆಂಬುಲೆನ್ಸ್ ಬರುವವರೆಗೆ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಸೇವೆ ಪುನರಾರಂಭಕ್ಕೆ ಜನತೆ ಪಟ್ಟು
ಕಡಬದಲ್ಲಿ ಸುಸಜ್ಜಿತ ಸಮುದಾಯ ಭವನ ಆಸ್ಪತ್ರೆ ನಿರ್ಮಿಸಲಾಗಿದ್ದರೂ, ಕಾಯಂ ವೈದ್ಯರ ಕೊರತೆಯಿಂದ ತುರ್ತು ಸಂದರ್ಭ ಪುತ್ತೂರು ಅಥವಾ ಮಂಗಳೂರಿನ ಆಸ್ಪತ್ರೆಯನ್ನು ಅವಲಂಬಿಸಬೇಕಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಆಂಬುಲೆನ್ಸ್ ಸೇವೆಯನ್ನು ಸ್ಥಗಿತಗೊಳಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ತುರ್ತು ಸಂದರ್ಭ ಖಾಸಗಿ ವಾಹನಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ನಿರ್ವಾಣವಾಗಿದ್ದು, ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಹೊಸ ಟಯರ್‌ಗಳನ್ನು ನೀಡುವ ಮೂಲಕ ಆಂಬುಲೆನ್ಸ್ ಸೇವೆಯನ್ನು ಪುನರಾರಂಭಿಸಲು ಕ್ರಮಕೈಗೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರೆ.
108 ಸಿಬ್ಬಂದಿಯನ್ನು ಪಕ್ಕದ ಸುಳ್ಯ, ಬೆಳ್ಳಾರೆ, ಶಿರಾಡಿ, ಆಲಂಕಾರು, ಕೊಕ್ಕಡದ ಆಂಬುಲೆನ್ಸ್‌ಗಳಿಗೆ ನಿಯೋಜಿಸಲಾಗಿದೆ. ಆಂಬ್ಯುಲೆನ್ಸ್ ಸೇವೆ ಸ್ಥಗಿತಗೊಂಡಿರುವುದು ನನ್ನ ಗಮನಕ್ಕೆ ಬಂದಿಲ್ಲ. ವಾರದ ಒಳಗೆ ಟಯರ್ ಹಾಕಿಸಿ ಸಮಸ್ಯೆ ಸರಿಪಡಿಸಲಾಗುವುದು. ತುರ್ತು ಸಂದರ್ಭ ಕಡಬ ಸಮುದಾಯ ಆರೋಗ್ಯ ಕೇಂದ್ರದ ಆಂಬುಲೆನ್ಸ್‌ನ್ನು ಉಪಯೋಗಿಸಲು ಸೂಚನೆ ನೀಡುತ್ತೇನೆ.
- ಡಾ.ತಿಮ್ಮಯ್ಯ, ಆರೋಗ್ಯಾಧಿಕಾರಿ, ದ.ಕ. ಜಿಲ್ಲೆ