ಉಪ್ಪಿನಂಗಡಿ: ಸಹಕಾರಿ ವ್ಯವಸಾಯಿಕ ಸಂಘ ನಿಯಮಿತ ನಿಕಟಪೂರ್ವ ಅಧ್ಯಕ್ಷ, ಸಹಕಾರಿ ಕ್ಷೇತ್ರದ ಧುರೀಣ ಕೆ.ವಿ.ಪ್ರಸಾದ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಕಾರಣಕ್ಕೆ ಮುಂದಿನ ಆರು ವರ್ಷಗಳ ಕಾಲ ಬಿಜೆಪಿಯಿಂದ ವಜಾಗೊಳಿಸಲಾಗಿದೆ.
ಈ ಸಂಬಂಧ ಬೆಳ್ತಂಗಡಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಎಂ.ಪ್ರಶಾಂತ್ ಪಾರೆಂಕಿ ಪಕ್ಷದ ಪ್ರಾಥಮಿಕ ಸದಸ್ಯತ್ವ, ಇತರ ಎಲ್ಲಾ ಸ್ತರದ ಜವಾಬ್ದಾರಿಗಳಿಂದ ವಜಾಗೊಳಿಸಿದ ಪತ್ರ ರವಾನಿಸಿದ್ದು, ಈ ಬಾರಿಯ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರಿ ಭಾರತಿ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವುದನ್ನು ಉಲ್ಲೇಖಿಸಿ ವಜಾಗೊಳಿಸಿರುವುದಾಗಿ ತಿಳಿಸಲಾಗಿದೆ.
ತಂತ್ರ ಪ್ರತಿತಂತ್ರಗಳ ನಡೆಯಲ್ಲಿ: ಕಳೆದ ಸಹಕಾರಿ ಸಂಘದ ಚುನಾವಣೆಯಲ್ಲಿ ಬಂಡಾಯ ಸ್ಪರ್ಧೆ ಮಾಡಿದ್ದ ಕೆ.ವಿ.ಪ್ರಸಾದ್ ಗೆಲುವಿನ ಸನಿಹಕ್ಕೆ ಬಂದಿದ್ದರೂ ಪರಿವಾರ ಸಂಘಟನೆ ಕಾರ್ಯಕರ್ತರ ಪ್ರಯತ್ನದಿಂದಾಗಿ ಸೋಲು ಕಂಡಿದ್ದರು. ಈ ಸೋಲಿಗೆ ಪ್ರತಿಯಾಗಿ ಪೂರ್ಣ ಬಹುಮತದಲ್ಲಿದ್ದ ಇಳಂತಿಲ ಗ್ರಾಪಂನ ಬಿಜೆಪಿ ಬೆಂಬಲಿತ ಆಡಳಿತ ಅಧ್ಯಕ್ಷ ತಿಮ್ಮಪ್ಪ ಗೌಡ ವಿರುದ್ಧ ಕಾಂಗ್ರೆಸ್, ಎಸ್‌ಡಿಪಿಐ ಸದಸ್ಯರ ಸಹಯೋಗದಲ್ಲಿ ಬಿಜೆಪಿ ಬೆಂಬಲಿತರು ಪಂಚಾಯಿತಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದರು. ಈ ನಿರ್ಣಯದಲ್ಲಿ ಅಧ್ಯಕ್ಷರನ್ನು ಪದಚ್ಯುತಗೊಳಿಸಲಾದ ನಡೆಯ ಹಿಂದೆ ಕೆ.ಪಿ.ಪ್ರಸಾದ್ ಪಾತ್ರವಿದೆ ಎಂಬ ಸುದ್ದಿ ಹರಿದಾಡಿ ಪರಿವಾರ ಸಂಘಟನೆ ಕಾರ್ಯಕರ್ತರನ್ನು ಆಕ್ರೋಶಕ್ಕೆ ಒಳಪಡಿಸಿತ್ತು. ಈ ಆಕ್ರೋಶದ ಫಲಶೃತಿಯೇ ಕೆ.ವಿ.ಪ್ರಸಾದ್ ಅವರನ್ನು ಪಕ್ಷದಿಂದಲೇ ಉಚ್ಛಾಟಿಸಿರುವುದಾಗಿದೆ ಎಂಬುವುದು ಕೇಳಿ ಬರುತ್ತಿರುವ ವಿಚಾರವಾಗಿದೆ.