ಬೆಂಗಳೂರು: ನ್ಯಾಯಾಮೂರ್ತಿಗಳು ಕೇವಲ ಪುಸ್ತಕದ ಬದನೆಕಾಯಿಯಾಗಬಾರದು. ಜನರ ಸಮಸ್ಯೆಗಳನ್ನು ಅರ್ಥೈಸಿಕೊಂಡು, ವಾಸ್ತವ ಮತ್ತು ಅರ್ಹತೆ ಆಧಾರದ ಮೇಲೆ ತೀರ್ಪು ನೀಡಬೇಕು ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಕಿವಿಮಾತು ಹೇಳಿದ್ದಾರೆ.
ಕುಮಾರಕೃಪಾ ರಸ್ತೆಯ ಗಾಂಧಿ ಭವನದಲ್ಲಿ ಕಾಡುಮಲ್ಲೇಶ್ವರ ಗೆಳೆಯರ ಬಳಗದ ಸಹಯೋಗದಲ್ಲಿ ಅಭಿರುಚಿ ಪ್ರಕಾಶನ ಹೊರ ತಂದಿರುವ ನಿವೃತ್ತ ಐಪಿಎಸ್ ಅಧಿಕಾರಿ ಸಿ. ಚಂದ್ರಶೇಖರ್ ಅವರ ‘ಕಾವೇರಿ ವಿವಾದ ಒಂದು ಐತಿಹಾಸಿಕ ಹಿನ್ನೋಟ’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
ನ್ಯಾಯಾಧೀಶರು ಸಾಮಾನ್ಯ ಜನತೆ, ದುರ್ಬಲ ವರ್ಗದವರ ಬಗ್ಗೆ ಚಿಂತನೆ ಮಾಡಬೇಕು. ಕೆಲ ನ್ಯಾಯಮೂರ್ತಿಗಳು ಹೇಗೆ ತೀರ್ಪು ನೀಡುತ್ತಾರೆ; ತೀರ್ಪು ನೀಡಿದ ನಂತರ ಅವರು ಹೇಗೆ ರಾಜ್ಯಪಾಲರು, ಸರ್ಕಾರದ ವಿವಿಧ ಹುದ್ದೆಗಳಿಗೆ ನೇಮಕಗೊಳ್ಳುತ್ತಾರೆ ಎಂಬುದು ದೇಶದ ಜನ ಗಮನಿಸುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಅಸಮಾಧಾನ ಹೊರಹಾಕಿದ್ದಾರೆ. ಕೆಲ ಮಹತ್ವದ ಪ್ರಕರಣಗಳ ತೀರ್ಪುಗಳನ್ನು ನೀಡಿದ ನಂತರ ಅವರು ಲೋಕಾಯುಕ್ತರು, ರಾಜ್ಯಪಾಲರಾಗುತ್ತಿದ್ದಾರೆ. ಇದು ಹೇಗೆ ಸಾಧ್ಯ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ; ಎಲ್ಲರಿಗೂ ಗೊತ್ತಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕಾಡುಮಲ್ಲೇಶ್ವರ ಗೆಳೆಯರ ಬಳಗದ ಅಧ್ಯಕ್ಷ ಬಿ.ಕೆ. ಶಿವರಾಂ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷರಾದ ನಾಡೋಜ ಡಾ. ಡಬ್ಲ್ಯೂ.ಪಿ. ಕೃಷ್ಣ, ಹಿರಿಯ ಪತ್ರಕರ್ತ ದಿನೇಶ್ ಅಮೀನ್‌ಮಟ್ಟು, ಪ್ರಕಾಶಕ ಅಭಿರುಚಿ ಗಣೇಶ್, ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಕಾವೇರಿ ವಿವಾದ ಕುರಿತಂತೆ ಕೃತಿಯು ಸಮಗ್ರ ಚಿತ್ರಣವನ್ನು ಕಟ್ಟಿಕೊಟ್ಟಿದ್ದು, ಬೆಂಗಳೂರಿನವರು ಕಾವೇರಿ ನೀರು ಕುಡಿಯುತ್ತಿದ್ದರೂ ಕಾವೇರಿ ವಿವಾದದ ಬಗ್ಗೆ ಅರಿವಿಲ್ಲ. ಬ್ರಿಟಿಷರ ಕಾಲದಿಂದ ಹಿಡಿದು ಈಗಿನ ವರೆಗೆ ಸಮಗ್ರ ಚಿತ್ರಣ ನೀಡುವ ಕೃತಿ, ಕಾವೇರಿ ವಿವಾದದ ಬಗ್ಗೆ ಜನರ ಕಣ್ತೆರಸಲಿದೆ.
ಬೆಳವಣಿಗೆಯಾಗುತ್ತಿರುವ ಜನಸಂಖ್ಯೆ, ಮಳೆ ಪ್ರಮಾಣ, ಪರಿಸರ ಬದಲಾವಣೆ, ಕೃಷಿಗೆ ಬೇಕಾಗುವ ನೀರಿನ ಲೆಕ್ಕ, ಆರ್ಥಿಕ ನೀತಿ ಹೀಗೆ ಹತ್ತು ಹಲವು ವಿಚಾರಗಳಲ್ಲಿ ರಾಜ್ಯದಿಂದ ಪ್ರಬಲ ವಾದ ಮಂಡನೆಯಾಗಿಲ್ಲ. ಕೇಂದ್ರ ಸರ್ಕಾರ ಕೂಡ ರಾಜ್ಯಕ್ಕೆ ನ್ಯಾಯ ನೀಡುತ್ತಿಲ್ಲ ಎಂದು ಜಸ್ಟೀಸ್ ಗೋಪಾಲಗೌಡರು ಇದೇ ವೇಳೆ ಅಸಮಾಧಾನ ವ್ಯಕ್ತಪಡಿಸಿದರು.