ಜಿಲ್ಲೆ

ವಾಟರ್​ ಸರ್​ಪ್ಲಸ್​ ಬೆಂಗಳೂರನ್ನಾಗಿಸಲು ಕೈಜೋಡಿಸಿ:ಜಲಮಂಡಳಿ ಅಧ್ಯಕ್ಷ ಮನವಿ

ಹರೀಶ್​​ ಕೆ.ಸಿ.

ಬೆಂಗಳೂರು: ನೀರು ಉಳಿತಾಯ, ಸದ್ಬಳಕೆ, ಸಂಸ್ಕರಿಸಿದ ನೀರು ಹಾಗೂ ಮಳೆ ನೀರಿನ ಸಮರ್ಪಕ ಬಳಕೆಯನ್ನು ಪ್ರೋತ್ಸಾಹಿಸುವ ಪಂಚಸೂತ್ರ ಅಳವಡಿಸಿಕೊಂಡು ವಾಟರ್​ ಸರ್​ಪ್ಲಸ್​ ಬೆಂಗಳೂರನ್ನಾಗಿಸಲು ಕೈಗಾರಿಕೋದ್ಯಮಿಗಳು ಕೈಜೋಡಿಸಬೇಕೆಂದು ಜಲಮಂಡಳಿ ಅಧ್ಯ ಡಾ. ರಾಮ್​ ಪ್ರಸಾತ್​ ಮನೋಹರ್​ ಮನವಿ ಮಾಡಿದ್ದಾರೆ.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್​ಕೆಸಿಸಿಐ) ಗುರುವಾರ ನಗರದಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದರು. ರಾಜಧಾನಿಯಲ್ಲಿ ಕುಡಿಯುವ ನೀರಿನ ಕೊರತೆಯಿಲ್ಲ. ಮಳೆಯ ಅಭಾವದಿಂದಾಗಿ ಅಂತರ್ಜಲ ಮಟ್ಟ ಕುಸಿತವಾದ ಪರಿಣಾಮ ಕೊಳವೆ ಬಾವಿಗಳು ಬತ್ತಿವೆ. ಇದರಿಂದಾಗಿ ಕಾವೇರಿ ನೀರಿನ ಮೇಲೆ ಅವಲಂಬನೆ ಹೆಚ್ಚಾಯಿತು. ಭವಿಷ್ಯದ ಸುಸ್ಥಿರ ಬೆಂಗಳೂರಿಗಾಗಿ, ಕೈಗಾರಿಕೆಗಳ ಅಭಿವೃದ್ದಿಗಾಗಿ ಎಲ್ಲರ ಸಹಕಾರವೂ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೈಗಾರಿಕೋದ್ಯಮಿಗಳು ಜಲಮಂಡಳಿಯ ಅಭಿಯಾನದಲ್ಲಿ ಕೈಜೋಡಿಸಬೇಕು ಎಂದರು.

ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಪ್ರತ್ಯೇಕ ಪೈಪ್​ಲೈನ್​ ಮೂಲಕ ಸಂಸ್ಕರಿಸಿದ ನೀರು ನೀಡಲು ಅಗತ್ಯ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಪೀಣ್ಯ ಕೈಗಾರಿಕಾ ಪ್ರದೇಶ ಹೊರತುಪಡಿಸಿ ಬೇರೆ ಪ್ರದೇಶಗಳಲ್ಲಿರುವ ಕೈಗಾರಿಕೆಗಳಿಗೆ ಟ್ಯಾಂಕರ್​ ಮೂಲಕ ಕಡಿಮೆ ದರದಲ್ಲಿ ಸಂಸ್ಕರಿಸಿದ ನೀರನ್ನು ನೀಡಲು ಸಿದ್ದರಿದ್ದೇವೆ. ನಮ್ಮ ಬಳಿ ಅಂದಾಜು 1,200 ಎಂಎಲ್​ಡಿ ಸಂಸ್ಕರಿಸಿದ ನೀರು ಲಭ್ಯವಿದೆ. ಇದರ ಸದ್ಬಳಕೆಯಿಂದ ಕಾವೇರಿ ನೀರಿನ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಇದರಿಂದಾಗಿ ಸಣ್ಣ ಕೈಗಾರಿಕೆಗಳಿಗೆ ಹಣದ ಉಳಿತಾಯಯಾಗಲಿದೆ ಎಂದು ಜಲಮಂಡಳಿ ಅಧ್ಯಕ್ಷರು ವಿವರಿಸಿದರು.

ನಗರದಲ್ಲಿ ಎದುರಾಗಿದ್ದ ನೀರಿನ ಸಮಸ್ಯೆಯನ್ನು ಜಲಮಂಡಳಿ ಸಮರ್ಪಕವಾಗಿ ನಿವಾರಿಸಿದೆ. ಇದರಲ್ಲಿ ಸಂಸ್ಥೆಯ ಅಧ್ಯಕ್ಷರ ಪಾತ್ರ ಹಿರಿದಾಗಿದೆ. ನೀರಿನ ಸದ್ಬಳಕೆ, ಉಳಿತಾಯ, ಸಂಸ್ಕರಿಸಿದ ನೀರು ಬಳಕೆಯನ್ನು ಪ್ರೋತ್ಸಾಹಿಸುವ ಕ್ರಮಗಳನ್ನು ಕೈಗಾರಿಕಾ ಸಂಸ್ಥೆಗಳು ಅಳವಡಿಸಿಕೊಳ್ಳಲಿವೆ. ಬೆಂಗಳೂರನ್ನು ಸುಸ್ಥಿರ ನಗರವನ್ನಾಗಿಸಲು ಜಲಮಂಡಳಿ ಜತೆ ಕೈಜೋಡಿಸಲಿದ್ದೇವೆ.

| ರಮೇಶ್​ ಚಂದ್ರ ಲಹೋಟಿ. ಎಫ್​ಕೆಸಿಸಿಐ ಅಧ್ಯಕ್ಷ.