ಗಂಗಾವತಿ ತಾಪಂ ಮಂಥನ ಸಭಾಂಗಣದಲ್ಲಿ ಆಯೋಜಿಸಿದ್ದ ಜೆಜೆಎಂ ಕಾಮಗಾರಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಶುಕ್ರವಾರ ಮಾತನಾಡಿದರು. ಶಾಸಕ ಗಾಲಿ ಜನಾರ್ದನ ರೆಡ್ಡಿ, ಇಇ ಮಹೇಶ ಶಾಸಿ ಇತರರಿದ್ದರು. 
ಜಿಲ್ಲೆ

ಜೆಜೆಎಂ ಯೋಜನೆ ಪೂರ್ಣಗೊಳಿಸಲು ಡೆಡ್‌ಲೈನ್

ಗಂಗಾವತಿ: ಜೆಜೆಎಂ ಯೋಜನೆಯ ಬಾಕಿ ಕಾಮಗಾರಿಯನ್ನು 15 ದಿನದೊಳಗೆ ಪೂರ್ಣಗೊಳಿಸಬೇಕು. ನಿರ್ಲಕ್ಷೃ ವಹಿಸಿದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಎಚ್ಚರಿಸಿದರು.

ಕಾಮಗಾರಿಯನ್ನು 15 ದಿನದೊಳಗೆ ಪೂರ್ಣಗೊಳಿಸದಿದ್ದರೆ ಕ್ರಮ

ನಗರದ ತಾಪಂ ಮಂಥನ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜೆಜೆಎಂ ಕಾಮಗಾರಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು. ತಾಲೂಕಿನಾದ್ಯಂತ ಯೋಜನೆ ಅನುಷ್ಠಾನಗೊಳಿಸಿದ್ದು, ಶೇ.80ರಷ್ಟು ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ನಿರ್ವಹಣೆ ಇಂಜಿನಿಯರ್ ಹೊರತುಪಡಿಸಿ ವಿವಿಧ ಇಲಾಖೆ ಅಧಿಕಾರಿಗಳನ್ನೊಳಗೊಂಡ ತಂಡ ಈಗಾಗಲೇ ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದು, ಲೋಪದೋಷಗಳ ವರದಿ ನೀಡಿದೆ ಎಂದರು.

ಟೆಂಡರ್ ಷರತ್ತಿನಂತೆ ಸಿಸಿ ರಸ್ತೆ ವ್ಯಾಪ್ತಿಯಲ್ಲಿ 2 ಅಡಿ, ಮಣ್ಣಿನ ರಸ್ತೆಯಲ್ಲಿದ್ದರೆ 3 ಅಡಿ ಕೆಳಗೆ ಪೂರೈಕೆ ಪೈಪ್‌ಲೈನ್ ಅಳವಡಿಸಬೇಕಿದೆ. ಪೈಪ್ ಸೇರಿ ಇತರೆ ಸಲಕರಣೆಗಳ ಗುಣಮಟ್ಟ ಪರಿಶೀಲನೆಗೆ ಮೈಸೂರಿನ ಪ್ರತ್ಯೇಕ ತಂಡವಿದೆ. ಪೂರ್ಣಗೊಂಡ ಮತ್ತು ಬಾಕಿ ಕಾಮಗಾರಿ ಕುರಿತು ನಿರ್ವಹಣೆ ಇಂಜಿನಿಯರ್ ಮತ್ತು ಗುತ್ತಿಗೆದಾರರೊಂದಿಗೆ ಚರ್ಚಿಸಲಾಗಿದೆ ಎಂದರು.

ಗುಣಮಟ್ಟಕ್ಕೆ ಆದ್ಯತೆ: ಗುಣಮಟ್ಟದ ಕಾಮಗಾರಿ ನಿರ್ವಹಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದ್ದು, ಅಂಗನವಾಡಿ, ಶಾಲೆ, ಆರೋಗ್ಯ ಕೇಂದ್ರಕ್ಕೆ ಕಡ್ಡಾಯವಾಗಿ ಪೈಪ್‌ಲೈನ್ ಕೈಗೊಳ್ಳಬೇಕಿದೆ. ಚರಂಡಿ ವ್ಯಾಪ್ತಿಯಲ್ಲಿ ಯಾವುದೇ ಕಾರಣಕ್ಕೂ ಪೈಪ್ ನಿರ್ವಹಿಸಲು ಅವಕಾಶವಿಲ್ಲ. ಜೆಜೆಎಂ ಯೋಜನೆ ನೀರು ಪೂರೈಕೆಗಾಗಿ ಟ್ರೀಟ್‌ಮೆಂಟ್ ಪ್ಲಾಂಟ್ ಆರಂಭಿಸಲಾಗಿದೆ. ಈಗಾಗಲೇ ಪ್ರಗತಿಯಲ್ಲಿವೆ.

ಸಭೆಯಲ್ಲಿ ಯೋಜನೆ ಬಗ್ಗೆ ಚರ್ಚೆ, ಮಾಹಿತಿ ಸಂಗ್ರಹಿಸಲಾಗಿದೆ. ಡಿಪಿಆರ್‌ನಂತೆ ಕಾಮಗಾರಿ ನಿರ್ವಹಿಸಲು ಸೂಚನೆ ನೀಡಲಾಗಿದೆ. ಆರ್‌ಒ ಪ್ಲಾಂಟ್‌ಗಳ ನಿರ್ವಹಣೆ ತೊಂದರೆಯಾಗಿದ್ದು, ಎನ್‌ಜಿಒಗಳಿಗೆ ವಹಿಸುವ ನಿಟ್ಟಿನಲ್ಲಿ ಸರ್ಕಾರ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಪ್ರತಿಯೊಬ್ಬರಿಗೂ ಶುದ್ಧ ಕುಡಿವ ನೀರು ಒದಗಿಸುವ ನಿಟ್ಟಿನಲ್ಲಿ ಕಾಲಮಿತಿಯೊಳಗೆ ಯೋಜನೆ ಪೂರ್ಣಗೊಳಿಸಲಾಗುತ್ತಿದೆ ತಿಳಿಸಿದರು.

ಶಾಸಕ ಗಾಲಿ ಜನಾರ್ದನ ರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಭೆಯಲ್ಲಿ ಯೋಜನೆಯ ಬಗ್ಗೆ ಪ್ರತಿಯೊಂದು ಮಾಹಿತಿ ಪಡೆಯಲಾಗಿದ್ದು, ಕೆಲ ಸೂಚನೆ ನೀಡಲಾಗಿದೆ. ಯೋಜನೆಯ ಸಮಗ್ರ ಮಾಹಿತಿಯನ್ನು ಶೀಘ್ರವೇ ಬಹಿರಂಗ ಪಡಿಸಲಾಗುವುದು ಎಂದರು.

ಸಭೆಯಲ್ಲಿ ಯೋಜನೆ ಲೋಪದೋಷಗಳ ಬಗ್ಗೆ ನಿರ್ವಹಣೆ ಇಂಜಿನಿಯರ್‌ರನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಗುತ್ತಿಗೆದಾರರೊಂದಿಗೆ ಚರ್ಚಿಸಿದರು. ಕಾಮಗಾರಿ ಪೂರ್ಣಗೊಳ್ಳು ಮೊದಲ ಹಂತದ ಡಿಪಿಆರ್‌ಗೆ 15 ದಿನ ಮತ್ತು ನಂತರದ ಡಿಪಿಆರ್ 3 ತಿಂಗಳ ಕಾಲವಕಾಶ ನೀಡಿದರು.

ಗ್ರಾಮೀಣ ನೀರು ಸರಬರಾಜು ಇಲಾಖೆ ಇಇ ಮಹೇಶ ಶಾಸಿ, ಎಇಇ ಸತೀಶ್, ಜಿಪಂ ಎಇಇ ವಿಜಯಕುಮಾರ, ತಾಪಂ ಇಒ ಲಕ್ಷ್ಮಿದೇವಿ ಯಾದವ್ ಸೇರಿ ನಿರ್ವಹಣೆ ಇಂಜಿನಿಯರ್ ಮತ್ತು ಪಿಡಿಒಗಳಿದ್ದರು.