ಜಿಲ್ಲೆ

25 ಸಾವಿರ ಮತಗಳಿಂದ ಗೆಲುವು ಸಾಧಿಸುವೆ: ದಾಸರಹಳ್ಳಿ ಜೆಡಿಎಸ್​ ಅಭ್ಯರ್ಥಿ ಮಂಜುನಾಥ್​ ವಿಶ್ವಾಸ

ಪೀಣ್ಯ ದಾಸರಹಳ್ಳಿ: ದಾಸರಹಳ್ಳಿ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಕೈಹಿಡಿಯಲಿದ್ದು, 25 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸುವುದಾಗಿ ಜೆಡಿಎಸ್​ ಅಭ್ಯರ್ಥಿ ಆರ್​. ಮಂಜುನಾಥ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕ್ಷೇತ್ರ ವ್ಯಾಪ್ತಿಯ ಬಾಗಲಗುಂಟೆ, ಮಲ್ಲಸಂದ್ರದಲ್ಲಿ ರಸ್ತೆಯಾತ್ರೆ ಮೂಲಕ ಮತಯಾಚನೆ ಮಾಡಿ ಮಾತನಾಡಿದರು. ಜನತೆಯ ಒಲವು ನನ್ನ ಮೇಲಿರುವುದರಿಂದ ಜೆಡಿಎಸ್​ ಕ್ಷೇತ್ರದಲ್ಲಿ ಗೆಲುವಿನ ರಣಭೇರಿ ಬಾರಿಸುವುದು ನಿಶ್ಚಿತ ಎಂದರು.

ಮನೆ ಮನೆಗೆ ಮಂಜಣ್ಣ....

ಕ್ಷೇತ್ರದೆಲ್ಲೆಡೆ ಮತದಾರರು ಸ್ವಯಂಪ್ರೇರಿತರಾಗಿ 'ಮನೆ-ಮನೆಗೆ ಮಂಜಣ್ಣ' ಎಂಬ ಘೋಷಣೆ ಮೊಳಗಿಸಿ ಬೆಂಬಲ ವ್ಯಕ್ತಪಡಿಸಿದರು. ರ್ಯಾಲಿ ಸಂದರ್ಭದಲ್ಲಿ ನಾಗರಿಕರು ಮಂಜುನಾಥ್​ ಅವರತ್ತ ಕೈಬೀಸಿ ಶುಭ ಕೋರಿದರು. ಬೃಹತ್​ ಹೂಹಾರ ಹಾಕುವ ಮೂಲಕ ಹರಸಿದರು.

ರಾಜ್ಯದಲ್ಲಿ ಜೆಡಿಎಸ್​ ಪರ ವಾತಾವರಣ ಇರುವುದರಿಂದ ಕುಮಾರಸ್ವಾಮಿ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗುವುದು ಶತಸಿದ್ಧ ಎಂದು ಮಂಜುನಾಥ್​ ಅಭಿಪ್ರಾಯ ವ್ಯಕ್ತಪಡಿಸಿದರು.

ಜನತೆಗೆ ಆಶ್ವಾಸನೆ

ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಮುಂದೆಯೂ ನಿಮ್ಮ ಮನೆಯ ಮಗನಾಗಿ ಕೆಲಸ ಮಾಡುತ್ತೇನೆ ಎಂದು ಜನತೆಗೆ ಆಶ್ವಾಸನೆ ನೀಡಿದರು. ವಾರ್ಡ್​ ಜೆಡಿಎಸ್​ ಸದಸ್ಯ ರುದ್ರೇಗೌಡ, ಮುಖಂಡ ಸಿ.ಜೆ. ರಮೇಶ್​, ಸಾವಿರಾರು ಕಾರ್ಯಕರ್ತರುಗಳು ಉಪಸ್ಥಿತರಿದ್ದರು.