ಜಿಲ್ಲೆ

ಆನೆ ಕ್ಯಾಂಪ್ ರಚನೆಗೆ ಮಾತುಕತೆ : ಶಾಸಕ ಹರೀಶ್ ಪೂಂಜ ಮಾಹಿತಿ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಚಾರ್ಮಾಡಿ ಅಥವಾ ಇಲ್ಲಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ 100 ಎಕರೆ ಜಾಗ ಗುರುತಿಸಿ ಆನೆ ಕ್ಯಾಂಪ್ ರಚಿಸುವ ಯೋಜನೆಗೆ ಅರಣ್ಯ ಸಚಿವರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಚಾರ್ಮಾಡಿ ಗ್ರಾಪಂ ಸಭಾಭವನದಲ್ಲಿ ಮಂಗಳವಾರ ಪಂಚಾಯಿತಿಮಟ್ಟದ ಜನಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗ್ರಾಪಂ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ವಿಪರೀತವಾಗಿರುವ ಕುರಿತು ಗ್ರಾಮಸ್ಥ ರಾಮಣ್ಣ ಭಂಡಾರಿ ವಿಷಯ ಪ್ರಸ್ತಾಪಿಸಿದಾಗ ಉತ್ತರಿಸಿದ ಶಾಸಕರು, ಇಲ್ಲಿನ ಪರಿಸರಗಳಲ್ಲಿ ನೇತಾಡುವ ಸೋಲಾರ್ ಬೇಲಿ, ಅಗತ್ಯ ಸ್ಥಳಗಳಲ್ಲಿ ಆನೆಗಳು ನುಸುಳದಂತೆ ತಡೆಗೋಡೆ ರಚಿಸುವ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಚಾರ್ಮಾಡಿ ಘಾಟಿ ಆರಂಭ ಸ್ಥಳದಲ್ಲಿ ಬೇರೆ ಕಡೆ ಹಿಡಿದ ವಿಷದ ಹಾವು, ಕೋತಿಗಳನ್ನು ತಂದು ಬಿಡುವುದರಿಂದ ಅವು ಸಮೀಪದ ಮನೆಗಳವರೆಗೆ ಬರುತ್ತಿವೆ. ಈ ಬಗ್ಗೆ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಲಾಯಿತು. ಪ್ರಾಥಮಿಕ ಆರೋಗ್ಯ ಕೇಂದ್ರದ ಜಾಗದ ಗಡಿ ಗುರುತು ವ್ಯವಸ್ಥೆ ತಕ್ಷಣ ಮಾಡಿಕೊಡುವಂತೆ ಆರ್‌ಐಗೆ ಶಾಸಕರು ತಿಳಿಸಿದರು.

ಚಿಬಿದ್ರೆ, ಬೀಟಿಗೆಯಲ್ಲಿ ಬಸ್ ಸ್ಟಾೃಂಡ್ ನಿರ್ಮಿಸಲು ಸೂಚಿಸಲಾಯಿತು. ಚಾರ್ಮಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ವಾರದ ಮೂರು ದಿನ ಮಾತ್ರ ಲಭ್ಯವಿರುತ್ತಾರೆ. ಇವರಿಗೆ ಮುಂಡಾಜೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಜವಾಬ್ದಾರಿ ನೀಡಿರುವುದರಿಂದ ಇಲ್ಲಿನ ಗ್ರಾಮಸ್ಥರಿಗೆ ಆರೋಗ್ಯ ಸೇವೆ ಸಿಗುತ್ತಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಸಿಜಿ ವ್ಯವಸ್ಥೆ ಇದ್ದರೂ ಅದನ್ನು ಮಾಡುತ್ತಿಲ್ಲ ಎಂಬುದನ್ನು ಶಾಸಕರ ಗಮನಕ್ಕೆ ತರಲಾಯಿತು. ಈ ಬಗ್ಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಸಂಬಂಧಪಟ್ಟವರಿಗೆ ಸೂಚಿಸುವುದಾಗಿ ಶಾಸಕರು ತಿಳಿಸಿದರು.

ಗ್ರಾಪಂ ಅಧ್ಯಕ್ಷೆ ಶಾರದಾ, ಉಪಾಧ್ಯಕ್ಷ ನೀಲು, ಮುಂಡಾಜೆ ಸಿಎ ಬ್ಯಾಂಕ್ ಅಧ್ಯಕ್ಷ ಪ್ರಕಾಶ ನಾರಾಯಣರಾವ್, ಉಪ ತಹಸೀಲ್ದಾರ್ ಜಯಾ, ಪಂಚಾಯಿತಿ ಸದಸ್ಯರು, ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು. ತಾಪಂ ಇಒ ಭವಾನಿ ಶಂಕರ್ ಸ್ವಾಗತಿಸಿದರು. ಪಿಡಿಒ ಪುರುಷೋತ್ತಮ ಜಿ., ಪಂಚಾಯಿತಿ ಸಿಬ್ಬಂದಿ ಸಹಕರಿಸಿದರು.

ಗ್ರಾಮಸ್ಥರ ಪ್ರಶ್ನೆಗಳಿಗೆ ಶಾಸಕರಿಂದ ಉತ್ತರ

ಚಾರ್ಮಾಡಿಯಲ್ಲಿ ಅಂಗನವಾಡಿಗೆ ಮೀಸಲಿಟ್ಟ ಜಾಗದಲ್ಲಿ ಕಟ್ಟಡ ನಿರ್ಮಿಸುವ ಕುರಿತು ಅಂಗನವಾಡಿಗಳಲ್ಲಿ ಎಲ್‌ಕೆಜಿ ಆರಂಭವಾಗಿದ್ದು, ಹೆಚ್ಚುವರಿ ಕಾರ್ಯಕರ್ತೆಯರನ್ನು ನೇಮಿಸಬೇಕು. ಗಾಂಧಿ ನಗರದಲ್ಲಿ ಕಳೆದ ವರ್ಷ ಮಳೆಗೆ ಮನೆ ಹಾನಿಯಾಗಿದ್ದು, ಪರಿಹಾರ ಬಿಡುಗಡೆಗೊಳ್ಳದ ಕುರಿತು, ಹೆಚ್ಚುವರಿ ವಿದ್ಯುತ್ ಪರಿವರ್ತಕ ಅಳವಡಿಕೆ, 94ಸಿ, 9/11, ಕಸ್ತೂರಿರಂಗನ್ ವರದಿ ಇತ್ಯಾದಿ ವಿಚಾರಗಳ ಬಗ್ಗೆ ಗ್ರಾಮಸ್ಥರ ಪ್ರಶ್ನೆಗಳಿಗೆ ಶಾಸಕರು ಉತ್ತರಿಸಿದರು.

ಹೆಚ್ಚುವರಿ ಬಸ್ ಸೌಲಭ್ಯಕ್ಕೆ ಆಗ್ರಹ

ಚಾರ್ಮಾಡಿಯಲ್ಲಿ ಹೆಚ್ಚಿನ ಎಕ್ಸ್‌ಪ್ರೆಸ್ ಬಸ್‌ಗಳಿಗೆ ನಿಲುಗಡೆ ಇದ್ದರೂ ನೀಡುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಮಹಿಳೆಯರಿಗೆ ಹೆಚ್ಚಿನ ತೊಂದರೆಯಾಗುತ್ತಿದೆ. ಮಂಗಳೂರಿನಿಂದ ಚಾರ್ಮಾಡಿಗೆ ಎರಡು ಗಂಟೆಗೆ ಒಂದರಂತೆ ಬಸ್ ಸೌಲಭ್ಯ ಕಲ್ಪಿಸಬೇಕು. ಶನಿವಾರ ಮಧ್ಯಾಹ್ನ, ಉಳಿದ ದಿನಗಳಲ್ಲಿ ಸಂಜೆ 4.30ರ ಬಳಿಕ ಚಾರ್ಮಾಡಿಗೆ ಉಜಿರೆಯಿಂದ ಶಾಲಾ ವಿದ್ಯಾರ್ಥಿಗಳ ಅನುಕೂಲಕ್ಕೆ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸುವಂತೆ ಗ್ರಾಮಸ್ಥ ಕೃಷ್ಣ ಭಟ್ ಆಗ್ರಹಿಸಿದರು. ಈ ಬಗ್ಗೆ ಡಿಪೋ ಮ್ಯಾನೇಜರ್ ಜತೆ ಚರ್ಚಿಸಿ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ಶಾಸಕರು ತಿಳಿಸಿದರು.

ಪ್ರತಿ ಗ್ರಾಮ ಪಂಚಾಯಿತಿ ಮಟ್ಟದ ಸಮಸ್ಯೆಗಳನ್ನು ಪರಿಹರಿಸುವ, ಗ್ರಾಮಸ್ಥರ ಕಚೇರಿ ಅಲೆದಾಟವನ್ನು ತಪ್ಪಿಸುವ ನಿಟ್ಟಿನಲ್ಲಿ ತಾಲೂಕಿನ ಪಂಚಾಯಿತಿಗಳಲ್ಲಿ ಜನಸ್ಪಂದನಾ ಕಾರ್ಯಕ್ರಮ ನಡೆಯುತ್ತಿದೆ. ಸಮಸ್ಯೆಗಳನ್ನು ಕಾರ್ಯಕ್ರಮದಲ್ಲಿ ದಾಖಲಿಸಿ 15 ದಿನದೊಳಗೆ ಈ ಬಗ್ಗೆ ವರದಿ ತರಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗುತ್ತದೆ. ಹರೀಶ್ ಪೂಂಜ, ಶಾಸಕರು, ಬೆಳ್ತಂಗಡಿ