ಜಿಲ್ಲೆ

ಸರ್ಕಾರಿ ಸೇವೆಗಳನ್ನು ಮನೆಬಾಗಿಲಿಗೇ ಒದಗಿಸಲು ಬರಲಿದ್ದಾನೆ, 'ಜನಸೇವಕ'!

ಬೆಂಗಳೂರು: ನಾಗರಿಕರು ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಕರ್ನಾಟಕ ಸರ್ಕಾರ 'ಜನಸೇವಕ' ಯೋಜನೆಯನ್ನು ಜಾರಿಗೊಳಿಸಿದೆ. ಒಟ್ಟು 8 ಇಲಾಖೆಗಳ 58 ರೀತಿಯ ಸೇವೆಗಳನ್ನು ನಾಗರಿಕರ ಮನೆ ಬಾಗಿಲಿಗೇ ತಲುಪಿಸಲು 'ಜನಸೇವಕ'ರು ಸಿದ್ಧರಾಗಿದ್ದಾರೆ.

ಜನಸೇವಕನ ಸೇವೆ ಪಡೆದುಕೊಳ್ಳಲಿಚ್ಛಿಸುವ ನಾಗರಿಕರು ಜನಸೇವಾ ಕೇಂದ್ರದಲ್ಲಿ ಸ್ಲಾಟ್ ಕಾಯ್ದಿರಿಸಬೇಕು. ದೂರವಾಣಿ ಸಂಖ್ಯೆ 080-44554455 ಕ್ಕೆ ಕರೆ ಮಾಡಿ ಅಥವಾ http://www.janasevaka.karnataka.gov.in ವೆಬ್​​ಸೈಟ್‌ನಲ್ಲಿ ಅಥವಾ ಮೊಬೈಲ್ ಒನ್ ಅಪ್ಲಿಕೇಶನ್​ನಲ್ಲಿ ಸ್ಲಾಟ್ ಕಾಯ್ದಿರಿಸಬಹುದು. ನಿಗದಿಯಾದ ಸಮಯದಲ್ಲಿ ಜನಸೇವಕ ನಾಗರಿಕರ ಮನೆಗೆ ಬಂದು ಸೇವೆಗೆ ಸಂಬಂಧಿಸಿದ ಅರ್ಜಿ ಸ್ವೀಕರಿಸುತ್ತಾನೆ. ದಾಖಲಾತಿಗಳನ್ನು ಸೇವಾಸಿಂಧು ತಂತ್ರಾಂಶದಲ್ಲಿ ಸ್ಕ್ಯಾನ್ ಮಾಡಿ ಅಧಿಕಾರಿಗೆ ಕಳುಹಿಸಲಾಗುವುದು. ನಂತರ ಸೇವೆಯು ಅವರ ಮನೆ ಬಾಗಿಲಿಗೆ ಪೋಸ್ಟ್ ಮೂಲಕ ತಲುಪಿಸಲಾಗುವುದು. ಡೆಲಿವರಿ ಬಾಯ್ ರೀತಿಯಲ್ಲಿ ಜನಸೇವಕ ನಾಗರಿಕರ ಮನೆಗೇ ಹೋಗಿ ಸೇವೆ ನೀಡುತ್ತಾನೆ. ಇದರಿಂದ ವಿಶೇಷವಾಗಿ ಹಿರಿಯ ನಾಗರೀಕರಿಗೆ ಮತ್ತು ವಿಶೇಷಚೇತನರಿಗೆ ಸಹಾಯವಾಗಲಿದೆ.

ಯೋಜನೆಯ ವಿವರ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ, ಕಂದಾಯ ಇಲಾಖೆ, ಕರ್ನಾಟಕ ಪೋಲಿಸ್ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಬಿಬಿಎಂಪಿ, ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಸೇವೆಗಳನ್ನು ನಾಗರಿಕರು ಈ ಮೂಲಕ ಪಡೆಯಬಹುದು.

* ಪ್ರತಿದಿನ ಬೆಳಿಗ್ಗೆ 8 ರಿಂದ ರಾತ್ರಿ 8 ರ ವರೆಗೆ ನಾಗರಿಕರು ಸ್ಲಾಟ್ ಬುಕ್ ಮಾಡುಬಹುದು.

* ನಾಗರಿಕರು ತಾವು ಕೋರಿರುವ ಸೇವೆಗೆ ಸಂಬಂಧಿತ ಇಲಾಖೆ ಶುಲ್ಕ, ಸೇವಾ ಶುಲ್ಕದೊಂದಿಗೆ 115 ರೂ.ಗಳನ್ನು ಜನಸೇವಕರು ಸ್ವೀಕರಿಸುತ್ತಾರೆ.

ಜನಸೇವಕ ಯೋಜನೆಯು ಮಾರ್ಚ್ 2, 2019 ರಂದು ಟಿ.ದಾಸರಹಳ್ಳಿಯಲ್ಲಿ ಶುರುವಾಗಿತ್ತು‌. ಪ್ರಾಯೋಗಿಕವಾಗಿ ಟಿ.ದಾಸರಹಳ್ಳಿ, ರಾಜಾಜಿನಗರ, ಮಹದೇವಪುರ, ಬೊಮ್ಮನಹಳ್ಳಿ, ಯಶವಂತಪುರದಲ್ಲಿ ನಡೆಸಲಾಗಿತ್ತು. ಇಲ್ಲಿಯವರೆಗೆ ಒಟ್ಟು 95,000 ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನು ಜನಸೇವಕ ಮೂಲಕ ಸಂಗ್ರಹಿಸಲಾಗಿದೆ.

ಇಂದು ಬೆಂಗಳೂರಿನ 198 ವಾರ್ಡ್‌ಗಳಿಗೆ ಜನಸೇವಕ ಯೋಜನೆಗೆ ಸಿಎಂ ಬಸವರಾಜ ಬೊಮ್ಮಾಯಿ ಹಸಿರು ನಿಶಾನೆ ತೋರಿದರು. ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ನಾಗರಿಕರಿಂದ ಸೇವೆಗಳನ್ನು ಕೋರಿ ನೀಡಲಾಗುವ ಅರ್ಜಿಗಳನ್ನು ಸ್ವೀಕರಿಸಿ ಸೇವೆಗಳನ್ನು ವಿತರಿಸಿದರು. ಉನ್ನತ ಶಿಕ್ಷಣ ಹಾಗೂ ಐಟಿಬಿಟಿ ಸಚಿವ ಡಾ. ಸಿ.ಎನ್.ಅಶ್ವತ್ಥ್ ನಾರಾಯಣ ಮತ್ತು ಅಧಿಕಾರಿಗಳು  ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ 240 ಬೈಕ್‌ಗಳಲ್ಲಿ ಜನಸೇವಕರು ರಾಲಿ ನಡೆಸಿದರು.