ಜಿಲ್ಲೆ

ಜನಾರ್ದನ ದೇವಳ ಜಾತ್ರಾ ಮಹೋತ್ಸವ

ಸೌಮ್ಯ ಆರ್

ಉಜಿರೆ: ಇಲ್ಲಿನ ಶ್ರೀ ಜನಾರ್ದನ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಆನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ನಾಯರ ನೇತೃತ್ವದಲ್ಲಿ ಅರ್ಚಕ ಶ್ರೀನಿವಾಸ ಹೊಳ್ಳರ ಧಾರ್ಮಿಕ ವಿಧಿಗಳೊಂದಿಗೆ ಜ.14ರಂದು ಪ್ರಾರಂಭಗೊಂಡಿದ್ದು, 23ರವರೆಗೆ ವಿವಿಧ ಧಾರ್ಮಿಕ, ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದೆ.

20ರಂದು ರಾತ್ರಿ ಶ್ರೀ ದೇವರ ಚಂದ್ರಮಂಡಲ ರಥೋತ್ಸವ ವೈಭವದಿಂದ ನಡೆಯಿತು. ಶ್ರೀ ಜನಾರ್ದನ ಸ್ವಾಮಿ ಉತ್ಸವ ಮೂರ್ತಿಯನ್ನು ಕೊಕ್ಕಡದ ವೆಂಕಟರಾಜ ಹೆಬ್ಬಾರ್ ಅವರಿಂದ ಹೊರಾಂಗಣದಲ್ಲಿ ವಿವಿಧ ವಾದ್ಯವಾದನಗಳ ಸುತ್ತುಬಲಿ, ಭಗಿನಿ ಭಜನಾ ಮಂಡಳಿ ಸದಸ್ಯರ ಶ್ರೀ ವಿಷ್ಣು ಸಹಸ್ರನಾಮ ಪಠಣಕ್ಕೆ ಪಲ್ಲಕಿ ಸುತ್ತು, ಯುವವಿಪ್ರರ ಜಾಗಟೆ ವಾದನಕ್ಕೆ ಬೆಳ್ಳಿರಥ ಸುತ್ತುಬಲಿ ಉತ್ಸವ ನಡೆದು ರಥಬೀದಿಯಲ್ಲಿ ಚಂದ್ರಮಂಡಲ ರಥಾರೋಹಣ ನಡೆಯಿತು. ಅಶ್ವತ್ಥಕಟ್ಟೆಯವರೆಗೆ ಭಕ್ತರು ರಥವನನ್ನೆಳೆದರು.

21ರಂದು ಬೆಳಗ್ಗೆ ಶ್ರೀ ದೇವರ ದರ್ಶನ ಬಲಿ ನಡೆದು ಬಟ್ಟಲು ಕಾಣಿಕೆ ಪ್ರಸಾದ ನಡೆಯಿತು. ಸಹಸ್ರಾರು ಭಕ್ತರು ಭಾಗವಹಿಸಿದ್ದರು. ಮಧ್ಯಾಹ್ನ ಮಹಾಪೂಜೆ, ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಅರ್ಚಕ ರಾಮಚಂದ್ರ ಹೊಳ್ಳರಿಂದ ಪಲ್ಲಪೂಜೆ ನಡೆಯಿತು.

ಪ್ರವೀಣಕುಮಾರ್ ಇಂದ್ರ ಅವರ ಸೇವಾರ್ಥ ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ 7 ಸಹಸ್ರಕ್ಕೂ ಅಧಿಕ ಭಕ್ತರು ಪ್ರಸಾದ ಸ್ವೀಕರಿಸಿದರು. ವೆಂಕಟ್ರಮಣ ಹೆಬ್ಬಾರ್, ರಾಮಚಂದ್ರ ಶೆಟ್ಟಿ ಉಸ್ತುವಾರಿಯಲ್ಲಿ ಅನ್ನಸಂತರ್ಪಣೆ ನಡೆಯಿತು. ವಿ.ಪ. ಸದಸ್ಯ ಪ್ರತಾಪಸಿಂಹ ನಾಯಕ್ ಅನ್ನಸಂತರ್ಪಣೆಗೆ ಚಾಲನೆ ನೀಡಿದರು. ಬೆಂಗಳೂರಿನ ಜಯಗೋಪಾಲ ಗೌಡ, ಮಹಿಶ್ ಕುಮಾರ್ ಸೇವಾರ್ಥ ದೇವಸ್ಥಾನವನ್ನು ಪುಷ್ಪಾಲಂಕಾರಗಳಿಂದ ಅಲಂಕರಿಸಲಾಗಿತ್ತು.

ರಾತ್ರಿ ಶ್ರೀ ಜನಾರ್ದನ ಸ್ವಾಮಿ, ಶ್ರೀ ಮಂಜುಳೇಶ ದೇವರ ಉಭಯ ಉತ್ಸವ ಮೂರ್ತಿಯನ್ನು ವೆಂಕಟರಾಜ ಹೆಬ್ಬಾರ್, ರಾಧಾಕೃಷ್ಣ ಹೊಳ್ಳರು ವಿವಿಧ ವಾದ್ಯವಾದನಗಳಿಗೆ ನರ್ತನ ಸೇವೆ ನಡೆಸಿದರು. ಮಧ್ಯರಾತ್ರಿ ವೇಳೆ ರಥಬೀದಿಯಲ್ಲಿ ದರ್ಶನ, ದೇವರ ರಥಾರೋಹಣ ನಡೆಯಿತು. ಬಳಿಕ ಭಕ್ತರ ಮಹಾರಥೋತ್ಸವ ಸಂಭ್ರಮದಿಂದ ನಡೆಯಿತು. ಅಶ್ವತ್ಥಕಟ್ಟೆಯವರೆಗೆ ಸಾಗಿದ ರಥ ಮರಳಿ ಸ್ವಸ್ಥಾನ ತಲುಪಿ ಶ್ರೀ ಭೂತಬಲಿ ನಡೆದು ದೇವರ ಶಯನೋತ್ಸವ, ಶ್ರೀ ಶಾರದಾ ಮಂಟಪದಲ್ಲಿ ಸಂಗೀತ, ನೃತ್ಯ, ಯಕ್ಷಗಾನ ಪ್ರದರ್ಶನ ನಡೆಯಿತು. ಸುಡುಮದ್ದು ಪ್ರದರ್ಶನ ವಿಶೇಷ ಆಕರ್ಷಣೆಯಾಗಿತ್ತು.

22ರಂದು ಬೆಳಗ್ಗೆ ಕವಾಟೋಧ್ಘಾಟನೆ ನಡೆದು ಸಂಜೆ ದೇವರು ನಿಡಿಗಲ್ ನೇತ್ರಾವತಿ ನದಿಗೆ ಅವಭೃಥೋತ್ಸವಕ್ಕೆ ತೆರಳಲಿದ್ದಾರೆ.ನಂತರ ಧ್ವಜಾವರೋಹಣ ನಡೆಯಲಿದೆ.