ಜಿಲ್ಲೆ

ನಾಡಿಗೆ ಹೆಗ್ಗಡೆ ಪರಿವಾರದ ಕೊಡುಗೆ ಅಪಾರ; ಸುರೇಂದ್ರ ಕುಮಾರ್​ ಅವರಿಗೆ ಜೈನ ಸಮಾಜ ರತ್ನ ಪ್ರಶಸ್ತಿ ಪ್ರದಾನ

ಬೆಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಪರಿವಾರದವರು ನಾಡಿಗೆ ನೀಡಿರುವ ಕೊಡುಗೆ ಅಪಾರವಾಗಿದ್ದು, ಅದಕ್ಕೆ ಪ್ರತಿಯಾಗಿ ಸಮಾಜ ಅವರನ್ನು ಗೌರವಿಸುತ್ತಿರುವುದು ಸೂಕ್ತವಾಗಿದೆ ಎಂದು ಆರತಿಪುರ ಜೈನಮಠದ ಜಗದ್ಗುರು ಸ್ವಸ್ತಿಶ್ರೀ ಸಿದ್ಧಾಂತ ಕೀರ್ತಿ ಭಟ್ಟಾರಕ ಸ್ವಾಮೀಜಿ ಪ್ರಶಂಸಿಸಿದ್ದಾರೆ.

ಕರ್ನಾಟಕ ಜೈನ ಭವನದಲ್ಲಿ ಜೈನ್ ಅಸೋಸಿಯೇಷನ್ ಆಯೋಜಿಸಿದ್ದ 2624ನೇ ಭಗವಾನ್ ಶ್ರೀಮಹಾವೀರ ಜನ್ಮಕಲ್ಯಾಣ ಮಹೋತ್ಸವದಲ್ಲಿ ಭಾರತೀಯ ಜೈನ್ ಮಿಲನ್ ಮುಖ್ಯಸ್ಥ ಧರ್ಮಸ್ಥಳದ ಸುರೇಂದ್ರ ಕುಮಾರ್ ಅವರಿಗೆ ‘ಕರ್ನಾಟಕ ಜೈನ ಸಮಾಜ ರತ್ನ’ ಪ್ರಶಸ್ತಿ ನೀಡಿ ಆಶೀರ್ವಚನ ನೀಡಿದರು.

ಕರ್ನಾಟಕ ಜೈನ ಸಮಾಜವು ಕೇವಲ ಧಾರ್ಮಿಕ ಕಾರ್ಯಕ್ರಮಗಳಿಗೆ ಸೀಮಿತವಾಗದೆ ಸಮಾಜದ ವಿದ್ಯಾರ್ಥಿಗಳಿಗೆ ವಸತಿ ನಿಲಯವನ್ನು ಸ್ಥಾಪಿಸಿ ಅವರ ಅಧ್ಯಯನಕ್ಕೆ ದಾನಿಗಳ ಸಹಕಾರದಲ್ಲಿ ಸೇವೆ ಒದಗಿಸುತ್ತಿದೆ. ನಿಜವಾದ ಭಗವಾನ್ ಮಹಾವೀರರ ಜನ್ಮಕಲ್ಯಾಣ ಇದರಿಂದ ಸಾಧ್ಯವಾಗಿದೆ. ಸಮಾಜದ ಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಂಡ ಸಾಕಷ್ಟು ಜನ ಹಿರಿಯರು ನೀಡಿದ ಕೊಡುಗೆಯಿಂದಾಗಿ ನಮ್ಮ ಸಮಾಜ ಮುಂದುವರೆಯುತ್ತಿದೆ. ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತವರ ಕುಟುಂಬದ ಎಲ್ಲ ಸದಸ್ಯರು ಸಮಾಜದ ಎಲ್ಲ ವರ್ಗದ ಜನರಿಗೆ ಸೇವೆ ನೀಡುತ್ತಿದ್ದು, ಅಂತಹ ಸೇವೆಯನ್ನು ಗುರುತಿಸುವ ಕಾರಣಕ್ಕೆ ಇಂದು ಸುರೇಂದ್ರ ಕುಮಾರ್ ಅವರಿಗೆ ಜೈನ ಸಮಾಜ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಈ ಹಿಂದೆ ಜೈನ ಕುಟುಂಬಗಳಲ್ಲಿ ಪ್ರಸಿದ್ಧವಾಗಿದ್ದ ‘ಜಿನ ಭಜನೆ’ ಆಧುನಿಕ ಕಾಲದ ಹೊಡೆತಕ್ಕೆ ಮರೆಯಾಗಿತ್ತು. ಅದನ್ನು ಮತ್ತೆ ಪುನರ್ ಸಂಘಟಿಸುವ ನಿಟ್ಟಿನಲ್ಲಿ ಸುರೇಂದ್ರಕುಮಾರ್ ದಂಪತಿಗಳ ಪಾತ್ರ ಪ್ರಮುಖವಾಗಿದೆ ಎಂದು ಸ್ವಾಮೀಜಿ ತಿಳಿಸಿದರು. ಇದೇ ವೇಳೆ ಕರ್ನಾಟಕದ ನಿವೃತ್ತ ಅಭಿಯಂತರ ಅಧೀಕ್ಷಕ ಹೆಚ್.ಡಿ.ಪಾರ್ಶ್ವನಾಥ್ ಅವರಿಗೂ ಕರ್ನಾಟಕ ಜೈನ ಸಮಾಜ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜೈನಧರ್ಮದ ಕುರಿತು ಸಂಶೋಧಕ ಡಾ.ಬಿ.ಪಿ.ನ್ಯಾಮಗೌಡ ಉಪನ್ಯಾಸ ನೀಡಿದರು. ಕರ್ನಾಟಕ ಜೈನ ಅಸೋಸಿಯೇಷನ್ ಅಧ್ಯಕ್ಷ ಜಿತೇಂದ್ರ ಕುಮಾರ್, ಉಪಾಧ್ಯಕ್ಷ ರಾಜಕೀರ್ತಿ, ಕಾರ್ಯದರ್ಶಿ ಆಶಾಪ್ರಭು ಮತ್ತಿತರರು ಉಪಸ್ಥಿತರಿದ್ದರು.

"ಆಚಾರ, ವಿಚಾರಗಳ ಜೊತೆಗೆ ಜೈನಧರ್ಮದ ತತ್ವಗಳ ಪ್ರಚಾರವೂ ಕೂಡಾ ಅಗತ್ಯವಾಗಿದೆ. ಆ ನಿಟ್ಟಿನಲ್ಲಿ ದುಬೈ, ಲಂಡನ್, ಸಿಂಗಾಪುರ, ಅಮೆರಿಕಾ ಇತ್ಯಾದಿ ರಾಷ್ಟ್ರಗಳಲ್ಲಿ ಜೈನ ತತ್ವ ಪ್ರಚಾರ ನಡೆಯುತ್ತಿದೆ. ಇತ್ತೀಚೆಗೆ ಮಹಾವೀರ ಜಯಂತಿಯಂದು ದಿಲ್ಲಿಯ ವಿಜ್ಞಾನ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣದಲ್ಲಿ 9 ಒಳ್ಳೆಯ ಕೆಲಸಗಳನ್ನು ಮಾಡಲು ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ನೂತನವಾಗಿ ಆಯ್ಕೆಗೊಂಡಿರುವ ಜೈನ ಅಸೋಸಿಯೇಷನ್ ಪದಾಧಿಕಾರಿಗಳು ಹೆಚ್ಚು ಕೆಲಸ ಮಾಡಬೇಕು." -ಸುರೇಂದ್ರ ಕುಮಾರ್, ಭಾರತೀಯ ಜೈನ್ ಮಿಲನ್ ಅಧ್ಯಕ್ಷ