| ಸ.ದಾ. ಜೋಶಿ ಕಲಬುರಗಿ
ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಮತ್ತೆ ಅತಂತ್ರ ಸ್ಥಿತಿ ನಿರ್ವಣವಾಗಿದೆ. ಮತದಾರರು ಆಡಳಿತಾರೂಢ ಬಿಜೆಪಿಗೆ ಜೈಕಾರ ಹಾಕಿದರೆ, ಪ್ರತಿಪಕ್ಷ ಕಾಂಗ್ರೆಸ್ ಅನ್ನೂ ಸ್ವೀಕಾರ ಮಾಡಿ ಜಾಣ ನಡೆ ಇಟ್ಟಿದ್ದಾರೆ. ಜಿದ್ದಿನ ಕುಸ್ತಿ ನಡುವೆಯೂ ಅತಂತ್ರ ಪರಿಸ್ಥಿತಿ ಸೃಷ್ಟಿಯಾದ ಕಾರಣ ಗದ್ದುಗೆಗೇರಲು ಬಿಜೆಪಿ-ಕಾಂಗ್ರೆಸ್ ನಾಯಕರು ತಂತ್ರ-ಪ್ರತಿತಂತ್ರ ಹೆಣೆಯುತ್ತಿದ್ದ್ದಾರೆ. ಕಿಂಗ್ವೆುೕಕರ್ ಸ್ಥಾನದಲ್ಲಿರುವ ಜೆಡಿಎಸ್ನತ್ತ ಎಲ್ಲರ ಚಿತ್ತ ನೆಟ್ಟಿದ್ದು, ಪಾಲಿಕೆ ಯಾರ ಪಾಲು ಎಂಬುದು ಭಾರಿ ಕುತೂಹಲ ಮೂಡಿಸಿದೆ.
55 ಸದಸ್ಯ ಬಲದ ಪಾಲಿಕೆಯಲ್ಲಿ ಕಾಂಗ್ರೆಸ್ 27, ಬಿಜೆಪಿ 23, ಜೆಡಿಎಸ್ 4 ಸ್ಥಾನ ಗಳಿಸಿವೆ. ಒಂದರಲ್ಲಿ ಪಕ್ಷೇತರ ಅಭ್ಯರ್ಥಿಗೆ ಜಯ ಸಿಕ್ಕಿದೆ. ಸ್ಪಷ್ಟ ಬಹುಮತದ ಮ್ಯಾಜಿಕ್ ಸಂಖ್ಯೆ 28 ದಾಟಲು ಯಾರಿಗೂ ಸಾಧ್ಯವಾಗಿಲ್ಲ. ಕಳೆದ ಬಾರಿ 23 ಸ್ಥಾನ ಪಡೆದಿದ್ದ ಕಾಂಗ್ರೆಸ್ ಈಗ 4 ಸ್ಥಾನ ಹೆಚ್ಚಿಸಿಕೊಂಡು ಮತ್ತೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಜೆಡಿಎಸ್ಗೆ ಹಿಂದಿನಕ್ಕಿಂತ 6 ಸ್ಥಾನ ಕಮ್ಮಿಯಾಗಿವೆ. ಆದರೂ ನಿರ್ಣಾಯಕ ಸ್ಥಾನದಲ್ಲಿದೆ. ಬಿಜೆಪಿ, ಕಾಂಗ್ರೆಸ್ ಯಾರೇ ಗದ್ದುಗೆಗೆ ಏರಬೇಕಾದರೂ ದಳಪತಿಗಳ ಬೆಂಬಲ ಅನಿವಾರ್ಯ. ಲಭ್ಯ ಮಾಹಿತಿ ಪ್ರಕಾರ, ಆಡಳಿತಾರೂಢ ಬಿಜೆಪಿ ಬೆನ್ನಿಗೆ ಇವರು ನಿಲ್ಲುವ ಸಾಧ್ಯತೆ ಹೆಚ್ಚಾಗಿದೆ. ಜಾತ್ಯತೀತ ಶಕ್ತಿ ಒಂದಾಗುವ ದಾಳ ಬೀಸಿ ಕಾಂಗ್ರೆಸ್ ನಾಯಕರೂ ಸಮರ್ಥನೆ ಗಿಟ್ಟಿಸಲು ಕಸರತ್ತು ನಡೆಸಿದ್ದಾರೆ. ಆದರೆ, ಬೆಂಬಲ ಯಾರಿಗೆ ಎಂಬ ಬಗ್ಗೆ ದಳಪತಿಗಳು ಸ್ಪಷ್ಟಪಡಿಸಿಲ್ಲ.
ರವಿಕುಮಾರ್ ಗೆಲುವಿನ ಉಸ್ತುವಾರಿ: ಕಲಬುರಗಿ ಪಾಲಿಕೆ ಚುನಾವಣೆಯಲ್ಲಿ ಹಿಂದಿನ ಸಲ ಕೇವಲ 7 ಸ್ಥಾನ ಗಳಿಸಿದ್ದ ಬಿಜೆಪಿ, ಇದೀಗ 16 ಸ್ಥಾನ ವೃದ್ಧಿಸಿಕೊಂಡು ಮೊದಲ ಸಲ ತನ್ನ ಶಕ್ತಿ ಸಾಬೀತುಪಡಿಸಿ ಗದ್ದುಗೆ ಸನಿಹಕ್ಕೆ ಬಂದು ನಿಂತಿದೆ. ಪಾಲಿಕೆ ಚುನಾವಣೆಯ ಉಸ್ತವಾರಿ ಹೊತ್ತಿದ್ದ ಎಂಎಲ್ಸಿ ಎನ್.ರವಿಕುಮಾರ್ ಈ ಫಲಿತಾಂಶದ ಮೂಲಕ ಗಮನ ಸೆಳೆದಿದ್ದಾರೆ.
ಅಂಕಿ-ಸಂಖ್ಯೆ ಲೆಕ್ಕಾಚಾರ: ಅತಂತ್ರ ಪರಿಸ್ಥಿತಿ ಬೆನ್ನಲ್ಲೇ ಸಂಖ್ಯಾಬಲ ಚರ್ಚೆಗೆ ಬಂದಿದೆ. ಮೇಯರ್, ಉಪ ಮೇಯರ್ ಆಯ್ಕೆಯಲ್ಲಿ ಸ್ಥಳೀಯ ಸಂಸದರು, ಶಾಸಕರು ಸಹ ಮತದಾನದ ಹಕ್ಕು ಹೊಂದಿದ್ದರಿಂದ ಯಾರಿಗೆಷ್ಟು ಲಾಭವಾಗಬಹುದೆಂಬ ಲೆಕ್ಕಾಚಾರ ಶುರುವಾಗಿದೆ. ಕಲಬುರಗಿ ಪಾಲಿಕೆಯಲ್ಲಿ ಸಂಸದ, ಶಾಸಕರು ಸೇರಿ 8 ಮತಗಳಿವೆ. ಇವುಗಳಲ್ಲಿ ಬಿಜೆಪಿ 6, ಕಾಂಗ್ರೆಸ್ಗೆ 2 ಸೇರಿವೆ. 55ಕ್ಕೆ 8 ಸೇರಿದರೆ ಸದನದ ಬಲ 63ಕ್ಕೇರುತ್ತದೆ. ಆಗ ಬಹುಮತಕ್ಕೆ 32 ಸ್ಥಾನ ಬೇಕು. ರಾಜ್ಯಸಭೆ ಸದಸ್ಯ ಡಾ.ಮಲ್ಲಿಕಾರ್ಜುನ ಖರ್ಗೆ, ಉತ್ತರ ಕ್ಷೇತ್ರದ ಶಾಸಕಿ ಕನೀಜ್ ಫಾತಿಮಾ ಕಾಂಗ್ರೆಸ್ನವರು. ಸಂಸದ ಡಾ.ಉಮೇಶ ಜಾಧವ್, ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ, ಎಂಎಲ್ಸಿಗಳಾದ ಬಿ.ಜಿ.ಪಾಟೀಲ್, ಶಶೀಲ್ ನಮೋಶಿ, ಸುನೀಲ್ ವಲ್ಲ್ಯಾಪುರೆ ಬಿಜೆಪಿಯವರು. ಇವರ ಮತ ಸೇರಿದರೆ ಬಿಜೆಪಿ ಬಲ 29, ಕಾಂಗ್ರೆಸ್ ಸಹ 29ಕ್ಕೇರಲಿದೆ. ಸ್ವತಂತ್ರ ಒಬ್ಬರು ಬಿಜೆಪಿ/ಕಾಂಗ್ರೆಸ್ಗೆ ಸಾಥ್ ನೀಡಿದರೂ ಯಾರ ಸಂಖ್ಯೆಯೂ 32 ಆಗಲ್ಲ. ಹೀಗಾಗಿ ಜೆಡಿಎಸ್ ಬೆಂಬಲ ಬೇಕೇಬೇಕು.